ಕೋಲ್ಕತ, ಮಾ. 02 (Daijiworld News/MB) : ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಆಯೋಜನೆ ಮಾಡಿದ್ದ ಸಭೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಗೋಲಿ ಮಾರೋ (ಗುಂಡಿಕ್ಕಿ) ಘೋಷಣೆ ಕೂಗಿದ ಆರೋಪದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬಿಜೆಪಿ ಕಾರ್ಯಕರ್ತರಾದ ಸುರೇಂದ್ರ ಕುಮಾರ್ ತಿವಾರಿ, ದ್ರುಭ ಬಸು, ಪಂಕಜ್ ಪ್ರಸಾದ್ ಎಂದು ಹೇಳಲಾಗುದೆ.
ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರ್ಯಾಲಿಯಲ್ಲಿ ಭಾಗವಹಿಸಲು ಹೋಗುತ್ತಿದ್ದ ಬಿಜೆಪಿ ಕಾರ್ಯಕರ್ತರ ಗುಂಪಿಗೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಗಳ ಗುಂಪು ಎದುರಾಗಿದ್ದು ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಗೋಲಿ ಮಾರೋ ಎಂಬ ಘೋಷಣೆ ಕೂಗಿದ್ದರು. ಗೋಲಿ ಮಾರೋ ಘೋಷಣೆ ಕೇಳಿ ಬಂದಂತೆ ಎರಡು ಗುಂಪುಗಳು ಪರಸ್ಪರರತ್ತ ನುಗ್ಗಲು ಯತ್ನಿಸಿದ್ದು ಆ ಕೂಡಲೇ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಆದರೆ ಈ ಘೋಷಣೆಯನ್ನು ತಮ್ಮ ಪಕ್ಷದ ಕಾರ್ಯಕರ್ತರು ಕೂಗಿದ್ದಾರೆ ಎಂಬ ಆರೋಪವನ್ನು ಅಲ್ಲಗಳೆದಿರುವ ಬಿಜೆಪಿ ಎಡರಂಗ ಮತ್ತು ಕಾಂಗ್ರೆಸ್ ಪಕ್ಷವು ಬಿಜೆಪಿ ಮೆರವಣಿಗೆಯೊಳಗೆ ಸೇರಿಸಿದ್ದ ಜನರ ಗುಂಪು ಈ ಘೋಷಣೆ ಕೂಗಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಈ ಘೋಷಣೆ ಕೂಗಿದವರನ್ನು ಕೂಡಲೇ ಬಂಧಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿತ್ತು.
ಹಾಗೆಯೇ ಎಡ ಪಕ್ಷಗಳು, "ದ್ವೇಷ ಬಿತ್ತುವ ಘೋಷಣೆ ಕೂಗಿದವರ ಮೇಲೆ ಕ್ರಮ ಕೈಗೊಳ್ಳದಿದ್ದಲ್ಲಿ ನ್ಯಾಯಾಲಯದ ಮೆಟ್ಟಿಲೇರುತ್ತೇವೆ" ಎಂದು ಎಚ್ಚರಿಕೆ ನೀಡಿದ್ದರು.