ಬೆಂಗಳೂರು, ಮಾ.02 (DaijiworldNews/PY) : ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್ ದೊರೆಸ್ವಾಮಿ ಕುರಿತಂತೆ ನೀಡಿರುವ ಹೇಳಿಕೆ ಕುರಿತಂತೆ ಮುಖ್ಯಮಂತ್ರಿ ಅವರೇ ಸದನಕ್ಕೆ ಬಂದು ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದ ಕಾರಣ ವಿಧಾನ ಪರಿಷತ್ ಕಲಾಪವನ್ನು ಒಂದು ಗಂಟೆ ಮುಂದೂಡಲಾಯಿತು.
ಸಭಾಪತಿ ಕೆ.ಪ್ರತಾಪ ಚಂದ್ರ ಶೆಟ್ಟಿ ಅವರು ಕಲಾಪ ಪ್ರಾರಂಭವಾಗುತ್ತಿದ್ದಂತೆ ಅಗಲಿದ ಮೂವರು ಗಣ್ಯರಾದ ಸಿ.ಚನ್ನಿಗಪ್ಪ, ಆರ್. ಎಸ್ ಭಾಗ್ವತ್ ಹಾಗೂ ಪ್ರೊ.ಷ.ಶೆಟ್ಟರ್ ಅವರಿಗೆ ಸಂತಾಪ ಸೂಚಿಸಿದರು. ವಿರೋಧ ಪಕ್ಷದ ನಾಯಕರು, ಸಭಾನಾಯಕ ಕಂಬನಿ ಸೂಚಿಸಿದ ಬಳಿಕ ಸದನ ಮೌನವಾಯಿತು.
ಸಭಾಪತಿ ಅವರು ಬಳಿಕ ಪ್ರಶ್ನೋತ್ತರ ಅವಧಿ ಪ್ರಾರಂಭಿಸುವುದೋ, ರಾಜ್ಯಪಾಲರ ಭಾಷಣಕ್ಕೆ ವಂದನೆ ಸೂಚಿಸುವ ಗೊತ್ತುವಳಿ ಮೇಲೆ ಚರ್ಚೆ ಮುಂದುವರಿಸುವುದೋ ಎಂದು ಕೇಳುತ್ತಿದ್ದ ಸಂದರ್ಭದಲ್ಲಿಯೇ ವಿರೋಧ ಪಕ್ಷದ ನಾಯಕ ಎಸ್ ಆರ್ ಪಾಟೀಲ ಅವರು ಎದ್ದು ನಿಂತು ಯತ್ನಾಳ್ ಅವರು ಮಹಾತ್ಮ ಗಾಂಧಿ ಕಾಲದ ಕೊನೆಯ ಕೊಂಡಿ ದೊರೆಸ್ವಾಮಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಸೂಕ್ತವಲ್ಲ ಎಂದು ಹೇಳಿದರು.
ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಆ ಸಂದರ್ಭ ಆಡಳಿತ ಹಾಗೂ ವಿರೋಧ ಪಕ್ಷಗಳ ಹಲವರು ಎದ್ದುನಿಂತು ಗದ್ದಲ ಆರಂಭಿಸಿದರು. ಸಭಾಪತಿ ಅವರು ಸರ್ಕಾರದಿಂದ ಉತ್ತರ ಕೊಡುವಂತೆ ಆಹ್ವಾನಿಸಿದಾಗ ಸಭಾನಾಯಕರು ಉತ್ತರ ಕೊಡಲು ಮುಂದಾದರು.
ಎಸ್. ಆರ್ ಪಾಟೀಲ ಅವರು, ಇದು ಗಂಭೀರ ವಿಚಾರ, ಮುಖ್ಯಮಂತ್ರಿ ಅವರೇ ಉತ್ತರ ನೀಡಬೇಕು ಎಂದು ಒತ್ತಾಯಿಸಿ ಸಭಾವತಿ ಅವರ ಪೀಠದ ಮುಂಭಾಗಕ್ಕೆ ಬಂದು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಇತರರೂ ಘೋಷಣೆ ಕೂಗಿದ್ದು, ಸಭಾಪತಿ ಅವರು ಕಲಾಪವನ್ನು ಒಂದು ಗಂಟೆ ಮುಂದೂಡಿದರು.