ಮುಂಬೈ, ಮಾ.02 (DaijiworldNews/PY) : ಮಹಾರಾಷ್ಟ್ರ ಸರ್ಕಾರವು ಸಿಎಎ, ಎನ್ಆರ್ಸಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸುವುದಿಲ್ಲ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.
ಮುಂಬೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಯಾರ ಪೌರತ್ವಕ್ಕೂ ಸಿಎಎ ಕಾಯ್ದೆಯಿಂದ ಧಕ್ಕೆ ಉಂಟಾಗುವುದಿಲ್ಲ. ಯಾರೂ ಆತಂಕಪಡುವ ಅಗತ್ಯವಿಲ್ಲ. ಮಹಾ ವಿಕಾಸ್ ಅಗಾಡಿ ಅಡಿ ಮೈತ್ರಿ ಪಕ್ಷಗಳು ಈ ಬಗ್ಗೆ ಚರ್ಚಿಸಿದ್ದು, ವಿಧಾನಸಭೆಯಲ್ಲಿ ನಿರ್ಣಯ ಮಂಡಿಸದಿರಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
ನಮ್ಮನ್ನು ಸಿಎಎ ವಿರುದ್ಧ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸುವಂತೆ ಯಾರೂ ಒತ್ತಾಯಿಸಿಲ್ಲ. ಇದೊಂದು ವದಂತಿ ಅಷ್ಟೇ. ಆದರೆ ಈ ಹೊಸ ಕಾಯ್ದೆ ಬಗ್ಗೆ ಹಲವರಲ್ಲಿ ಆತಂಕ ಹಾಗೂ ಅಪನಂಬಿಕೆ ಇದೆ. ಇದನ್ನು ಹೋಗಲಾಡಿಸುವ ಸಲುವಾಗಿ ಜನಜಾಗೃತಿ ಮಾಡುತ್ತೇವೆ ಎಂದರು.
ಬಿಹಾರ ಸರ್ಕಾರ ಸಿಎಎ ವಿಚಾರವಾಗಿ ಅನುಸರಿಸಿರುವ ನೀತಿಯನ್ನೂ ನಾವು ಅನುಸರಿಸುವುದಿಲ್ಲ ಎಂದು ಹೇಳಿದ್ದಾರೆ.