ಗಾಂಧಿನಗರ, ಮಾ. 02 (Daijiworld News/MB) : ವಧುವಿನ ತಾಯಿಯೊಂದಿಗೆ ವರನ ತಂದೆ ಪರಾರಿಯಾಗಿ 16 ದಿನಗಳ ಬಳಿಕ ಮನೆಗೆ ಹಿಂದಿರುಗಿ ಬಂದಿದ್ದವರು ಈಗ ಮತ್ತೊಮ್ಮೆ ಪರಾರಿಯಾಗಿದ್ದಾರೆ.
ಮಕ್ಕಳ ಮದುವೆಗೆ ಸ್ವಲ್ಪ ದಿನಗಳು ಇರುವಾಗಲೇ ವಧುವಿನ ತಾಯಿ ಹಾಗೂ ವರನ ತಂದೆ ಪರಾರಿಯಾಗಿದ್ದರು. ಆದಾದ 16 ದಿನಗಳ ನಂತರ ಇಬ್ಬರು ತಮ್ಮ ತಮ್ಮ ಮನೆಗೆ ಹಿಂದಿರುಗಿದ್ದರು. ಆದರೆ ಇದೀಗ ಮತ್ತೆ ಶನಿವಾರ ಈ ಜೋಡಿಗಳು ಪರಾರಿಯಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಫೆ.ಯಲ್ಲಿ ಇವರಿಬ್ಬರ ಮಕ್ಕಳಿಗೆ ವಿವಾಹವಾಗಬೇಕಿತ್ತು. ಆದರೆ ಜನವರಿ 10ರಂದು ಇವರಿಬ್ಬರು ಕಾಣೆಯಾಗಿದ್ದರು. ಜನವರಿ 26ರಂದು ಇವರಿಬ್ಬರು ತಮ್ಮ ತಮ್ಮ ಮನೆಗೆ ವಾಪಾಸ್ ಆಗಿದ್ದು ಈಗ ಪುನಃ ಕಾಣೆಯಾಗಿದ್ದು ಅವರು ಸೂರತ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ ಎಂದು ವರದಿಯಾಗಿದೆ.
ವಧುವಿನ ತಾಯಿ ಹಾಗೂ ವರನ ತಂದೆ ಯುವಕರಾಗಿದ್ದಾಗ ಪ್ರೀತಿಸುತ್ತಿದ್ದರು. ಆದರೆ ಕಾರಣಾಂತರದಿಂದ ಇಬ್ಬರು ಬೇರೆ ಬೇರೆ ವಿವಾಹವಾಗಿದ್ದರು. ಈಗ ಪುನಃ ತಮ್ಮ ಮಕ್ಕಳ ಮೂಲಕ ಭೇಟಿಯಾದ ಇವರಿಗೆ ಮತ್ತೆ ಪ್ರೀತಿ ಚಿಗುರಿದ್ದು ಮಕ್ಕಳಿಗೆ ತಿಳಿಯದಂತೆ ಮನೆಯಿಂದ ಪರಾರಿಯಾಗಿದ್ದರು.
ಈ ಸಂದರ್ಭದಲ್ಲಿ ಇವರಿಬ್ಬರ ಸ್ನೇಹಿತರು ಇವರಿಬ್ಬರಿಗೂ ಈ ಮೊದಲೇ ಸಂಬಂಧವಿತ್ತು ಎಂದು ತಿಳಿಸಿದ್ದರು. ಕಾಣೆಯಾದ 16 ದಿನಗಳ ಬಳಿಕ ಇಬ್ಬರು ಹಿಂದಿರುಗಿ ಬಂದಿದ್ದು ವಧುವಿನ ತಾಯಿಯ ಪತಿ ಅವರನ್ನು ಮನೆಗೆ ಸೇರಿಸಿಕೊಳ್ಳಲು ಒಪ್ಪಲಿಲ್ಲ. ಆ ಕಾರಣದಿಂದಾಗಿ ಆಕೆ ತನ್ನ ತಾಯಿಯ ಮನೆಯಲ್ಲಿದ್ದರು. ಶನಿವಾರ ಮತ್ತೆ ಇವರಿಬ್ಬರು ಪರಾರಿಯಾಗಿದ್ದಾರೆ.
ಆದರೆ ಕುಟುಂಬಸ್ಥರು ಈ ಬಗ್ಗೆ ಯಾವುದೇ ದೂರು ನೀಡಿಲ್ಲ.