ಕಲಬುರಗಿ, ಮಾ. 02 (Daijiworld News/MB) : ಮಾಧ್ಯಮ ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಅಂಗ ಎಂದು ಪರಿಗಣಿಸಲ್ಪಡುತ್ತದೆ. ಹಾಗಿರುವಾಗ ಮಾಧ್ಯಮವನ್ನು ಕಲಾಪಕ್ಕೆ ನಿರ್ಬಂಧಿಸುವುದು ಸರಿಯಲ್ಲ. ಹಾಗಾಗೀ ತಕ್ಷಣ ಈ ನಿರ್ಬಂಧವನ್ನು ಹಿಂತೆಗೆಯಬೇಕು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಅವರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತಾಗಿ ಪತ್ರದ ಮೂಲಕ ಮನವಿ ಮಾಡಿರುವ ಅವರು, "ವಿಧಾನಸಭೆ ಕಲಾಪದಲ್ಲಿ ಸಂವಿಧಾನದ ಆಶಯದ ಕುರಿತಾಗಿ ಚರ್ಚೆ ಮಾಡಲು ತೀರ್ಮಾನ ಮಾಡಿರುವುದು ಉತ್ತಮ ಬೆಳವಣಿಗೆ. ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಅಂಗವಾದ ಮಾಧ್ಯಮದ ಪ್ರತಿನಿಧಿಗಳಿಗೆ ಕಲಾಪದ ಒಳಗಡೆ ಪ್ರವೇಶಕ್ಕೆ ನಿರ್ಬಂಧ ಹೇರಿರುವುದು ಸರಿಯಾದ ಕ್ರಮವಲ್ಲ" ಎಂದು ಅಭಿಪ್ರಾಯ ಪಟ್ಟರು.
"ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳು ಕಲಾಪದಲ್ಲಿ ಪಾಲ್ಗೊಂಡು ಜನರ ಸಮಸ್ಯೆಗಳನ್ನು ಚರ್ಚಿಸುವ ಹಾಗೂ ಪರಿಹಾರ ಕಂಡುಕೊಳ್ಳುವ ಬಗ್ಗೆ ಜನರು ತಿಳಿದುಕೊಳ್ಳಬೇಕು.ಅದು ಕೇವಲ ಮಾಧ್ಯಮಗಳಿಂದ ಮಾತ್ರ ಸಾಧ್ಯ. ಹಾಗಿರುವಾಗ ಮಾಧ್ಯಮಕ್ಕೆ ನಿರ್ಬಂಧಿಸಿದರೆ ಅದು ತರುವುದು ಹಾಗೆಯೇ ಕಲಾಪದ ಕುರಿತಾದ ಮಾಹಿತಿ ಜನರಿಗೆ ದೊರೆಯದಂತೆ ಮಾಡುವುದಾಗಿದೆ. ಆ ನಿಟ್ಟಿನಲ್ಲಿ ಮಾಧ್ಯಮಗಳಿಗೆ ವರದಿ ಮಾಡಲು ಅವಕಾಶ ನೀಡ ಬೇಕು" ಎಂದು ಪತ್ರದ ಮೂಲಕ ಕೋರಿದ್ದಾರೆ.