ಬೆಂಗಳೂರು, ಮಾ.02 (DaijiworldNews/PY) : "ಒಬ್ಬ ಹಿರಿಯ ಸ್ವಾತಂತ್ರ್ಯ ಹೋರಾಟಗಾರನನ್ನು ಅವಮಾನಿಸಿರುವುದು ಸಂವಿಧಾನಕ್ಕೆ ಮಾಡಿರುವ ಅವಮಾನ. ಇಂತಹ ದೇಶದ್ರೋಹಿಗಳ ಜೊತೆ ಕಲಾಪದಲ್ಲಿ ಕುಳಿತುಕೊಳ್ಳಲು ನಾವು ಸಿದ್ಧರಿಲ್ಲ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, "ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸದನಕ್ಕೆ ಅಗೌರವ ತೋರಿದ್ದಾರೆ. ಸಂವಿಧಾನದ ಹೆಸರಲ್ಲಿ ಪ್ರಮಾಣ ಮಾಡಿದವರು ಒಬ್ಬ ಹಿರಿಯ ಸ್ವಾತಂತ್ರ್ಯ ಹೋರಾಟಗಾರನಿಗೆ ಅವಮಾನಿಸಿರುವುದು ಸಂವಿಧಾನಕ್ಕೆ ಮಾಡಿರುವ ಅವಮಾನ. ಇಂತಹ ದೇಶದ್ರೋಹಿಗಳ ಜೊತೆ ಕಲಾಪದಲ್ಲಿ ಕುಳಿತುಕೊಳ್ಳಲು ನಾವು ಸಿದ್ಧರಿಲ್ಲ. ಅವರನ್ನು ಸಭಾಧ್ಯಕ್ಷರು ತಕ್ಷಣ ಅಮಾನತು ಮಾಡಬೇಕು" ಎಂದಿದ್ದಾರೆ.
"ಯತ್ನಾಳ್ ಹೇಳಿಕೆಯನ್ನು ಬಿಜೆಪಿ ನಾಯಕರು, ಮಂತ್ರಿಗಳು ಖಂಡಿಸುವ ಬದಲು ಬೆಂಬಲಿಸಿ ಮಾತನಾಡುತ್ತಾರೆ. ದೇಶದ ಸ್ವಾತಂತ್ರ್ಯ ಚಳುವಳಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಪಕ್ಷದ ಶಾಸಕನೊಬ್ಬ ಅವಮಾನಿಸುವುದು ವೈಯಕ್ತಿಕ ಅಭಿಪ್ರಾಯ ಹೇಗಾಗುತ್ತದೆ? ಹಾಗಾದರೆ ಯತ್ನಾಳ್ ಹೇಳಿಕೆಗೆ ಬಿಜೆಪಿ ಸಮ್ಮತಿ ಇದೆಯೇ ಎಂಬುದನ್ನು ಅಧಿಕೃತವಾಗಿ ತಿಳಿಸಲಿ" ಎಂದು ಹೇಳಿದ್ದಾರೆ.
"ಸ್ವಾತಂತ್ರ್ಯಹೋರಾಟಗಾರ ದೊರೆಸ್ವಾಮಿಯವರನ್ನು ಒಂದು ಪಕ್ಷಕ್ಕೆ ಕಟ್ಟಿಹಾಕುವುದು ಸರಿಯಲ್ಲ. ಅವರು ಹಿಂದೆ ತುರ್ತುಪರಿಸ್ಥಿತಿಯ ಕಾಲದಲ್ಲಿ ಇಂದಿರಾಗಾಂಧಿ ವಿರುದ್ಧವೂ ಪ್ರತಿಭಟಿಸಿದ್ದರು. ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಸರ್ಕಾರದ ವಿರುದ್ಧವೂ ಪ್ರತಿಭಟನೆ ನಡೆಸಿದ್ದರು" ಎಂದಿದ್ದಾರೆ.
"ಸದನಕ್ಕೆ ಅಗೌರವ ತೋರುವ ಸದಸ್ಯರನ್ನು ಅಮಾನತು ಮಾಡಬೇಕೆಂದು ಮಧ್ಯಪ್ರದೇಶ ಹೈಕೋರ್ಟ್ ಆದೇಶ ನೀಡಿತ್ತು. ಆ ತೀರ್ಪನ್ನು ಆಧಾರವಾಗಿಟ್ಟುಕೊಂಡು ಯತ್ನಾಳ್ ಅವರನ್ನು ಅಮಾನತು ಮಾಡುವಂತೆ ಸಭಾಧ್ಯಕ್ಷರಲ್ಲಿ ಒತ್ತಾಯ ಮಾಡಿದ್ದೇವೆ. ಆದರೆ ನಮಗೆ ಮಾತನಾಡಲು ಅವಕಾಶವನ್ನೇ ನೀಡದಿರುವ ಸಭಾಧ್ಯಕ್ಷರ ವರ್ತನೆ ಸರಿ ಅಲ್ಲ" ಎಂದು ಟ್ವೀಟ್ ಮಾಡಿದ್ದಾರೆ.