ಶಹಾಪುರ, ಮಾ.02 (DaijiworldNews/PY) : "ಪ್ರತಿಯೊಬ್ಬರಿಗೂ ಸಂವಿಧಾನವು ಉತ್ತಮ ಅವಕಾಶಗಳನ್ನು ನೀಡಿದೆ. ದೇಶಭಕ್ತಿ ಹಾಗೂ ದೇಶದ ಏಕತೆ ಯಾರೊಬ್ಬರ ಸ್ವತ್ತೂ ಅಲ್ಲ. ದೇಶದ ಪ್ರತಿ ಪ್ರಜೆಯೂ ದೇಶಭಕ್ತರೇ ಎಂಬುದನ್ನು ಮರೆಯಬಾರದು. ಸಂವಿಧಾನವನ್ನು ಮುನ್ನಡೆಸುವ ಜನಪ್ರತಿನಿಧಿಗಳು ಸರಿಯಾಗಿದ್ದರೆ, ದೇಶ ಸರಿಯಾದ ಮಾರ್ಗದಲ್ಲಿ ಸಾಗುತ್ತದೆ" ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಹತ್ತಿಗುಡೂರ ಗ್ರಾಮದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, "ಎಲ್ಲರಿಗೂ ಡಾ.ಬಾಬಾಸಾಹೇಬರ ಆಶಯದಿಂದ ಅಧಿಕಾರ ಸಿಕ್ಕಿದೆ ಎಂಬುದನ್ನು ಜನಪ್ರತಿನಿಧಿಗಳು ಅರಿತುಕೊಳ್ಳಬೇಕು" ಎಂದರು.
"ಸರ್ವರಿಗೂ ನ್ಯಾಯ ದೊರಕಿಸಿ ಕೊಡುವ ಹಾಗೂ ಸರ್ವರಿಗೂ ಸಮಪಾಲು ಕಲ್ಪಿಸಿಕೊಡುವ, ದೇಶದ 130 ಕೋಟಿ ಜನತೆಯ ಶ್ರೇಯೋಭಿವೃದ್ದಿ ಬಯಸುವ ವ್ಯವಸ್ಥೆ ಅಡಕವಾಗಿದೆ. ನಾವೆಲ್ಲರೂ ಸಂವಿಧಾನದ ಆಶಯದಂತೆ ಸಾಗಬೇಕು" ಎಂದು ತಿಳಿಸಿದರು.
"ಬೈಬಲ್, ಭಗವದ್ಗೀತೆ, ಖುರಾನ್, ವಚನಗಳು, ಗುರು ಗ್ರಂಥಮ ಆಯಾ ಸಮುದಾಯಗಳಿಗೆ ಮುಖ್ಯವಾಗಿವೆ. ಆದರೆ, ಇಡೀ ದೇಶದ ಮನುಕುಲಕ್ಕೆ ಸಂವಿಧಾನ ಮಹತ್ವದ್ದಾಗಿದೆ. ಒಂದು ಜಾತಿಗೆ ಬಾಬಾ ಸಾಹೇಬರನ್ನು ಸೀಮಿತ ಮಾಡಬೇಡಿ. ಹತ್ತಿಗುಡೂರ ಗ್ರಾಮಕ್ಕೆ ಇಂತಹ ಮಹಾನ್ ಮಾನವತಾವಾದಿ ಪುತ್ಥಳಿಯನ್ನು ಸರ್ವ ಸಮಾಜದವರು ಒಗ್ಗೂಡಿ ಅನಾವರಣ ಮಾಡಿರುವು ಹೆಮ್ಮೆಯ ವಿಚಾರ. ಬದುಕಿನಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು" ಎಂದು ಹೇಳಿದರು.
"ಈ ಭಾಗದ ಸಂಸದರು 2000 ಕೋಟಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಗೆ ಅನುದಾನ ನೀಡುವಂತೆ ಹೆಚ್ಚು ಕಾಳಜಿ ತೆಗೆದುಕೊಳ್ಳಬೇಕು. ಈ ವಿಚಾರವಾಗಿ ನಿಷ್ಕಾಳಜಿ ವಹಿಸಿದರೆ ಅನುದಾನ ಬೇರೆ ಬೇರೆ ಜಿಲ್ಲೆಗಳಿಗೆ ಸೀಮಿತವಾಗುತ್ತದೆ. ಅಭಿವೃದ್ದಿಗೆ ಇದರಿಂದ ಹೊಡೆತ ಬೀಳುತ್ತದೆ" ಎಂದರು.
ಸಂಸದ ರಾಜಾ ಅಮರೇಶ ನಾಯಕ ಮಾತನಾಡಿ, "ಡಾ.ಅಂಬೇಡ್ಕರ್ ಪುತ್ಥಳಿಗೆ ಹೈಮಾಸ್ಕ್ ವಿದ್ಯುತ್ ದೀಪ, ಗ್ರಾಮದಲ್ಲಿ ಸೋಲಾರ್ ವಿದ್ಯುತ್ ದೀಪ ವ್ಯವಸ್ಥೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ" ಎಂದು ತಿಳಿಸಿದರು.