ಕಲಬುರ್ಗಿ, ಮಾ.02 (DaijiworldNews/PY) : "ದೇಶ ಅಭಿವೃದ್ಧಿಯಾಗಬೇಕಾದರೆ ಚಿಂತಕರ ಪಡೆ ಅವಶ್ಯ. ಚಿಂತಕರಿಂದಲೇ ದೇಶ ನಡೆಯುತ್ತದೆ. ಆದರೆ, ಬಿಜೆಪಿಗೆ ಚಿಂತಕರ ಪಡೆ ಬೇಕಿಲ್ಲ. ಅವರಿಗೆ ಹಂತಕರ ಪಡೆ ಮಾತ್ರ ಬೇಕಿದೆ" ಎಂದು ಸಿಪಿಐ ಮುಖಂಡ ಸಿದ್ಧನಗೌಡ ಪಾಟೀಲ ಹೇಳಿದ್ಧಾರೆ.
ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, "ಬಿಜೆಪಿಯಿಂದ ಪೌರತ್ವ ವಿರೋಧಿ ಹೋರಾಟ ನೆಪಮಾಡಿಕೊಂಡು ದೇಶದ ಮೂಲಭೂತ ಸಮಸ್ಯೆಗಳನ್ನು ಬದಿಗೆ ಸರಿಸುವ ಕೆಲಸ ನಡೆದಿದೆ. ದೇಶಾದ್ಯಂತ ಭಯ ಹುಟ್ಟಿಸೋ ಕೆಲಸ ನಡೆದಿದೆ" ಎಂದರು.
"ಆಡಳಿತಾರೂಢ ಪಕ್ಷವನ್ನು ಹಾಗೂ ಆಡಳಿತವನ್ನು ಪ್ರಶ್ನೆಯೇ ಮಾಡಬಾರದೆಂಬ ವಾತಾವರಣ ಸೃಷ್ಟಿಸಲಾಗುತ್ತಿದೆ. ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ದೇಶ ಅಭಿವೃದ್ಧಿಯಾಗಬೇಕಾದರೆ ಚಿಂತಕರ ಪಡೆ ಅವಶ್ಯ. ಚಿಂತಕರಿಂದಲೇ ದೇಶ ನಡೆಯುತ್ತದೆ. ಆದರೆ, ಬಿಜೆಪಿಗೆ ಚಿಂತಕರ ಪಡೆ ಬೇಕಿಲ್ಲ. ಅವರಿಗೆ ಹಂತಕರ ಪಡೆ ಮಾತ್ರ ಬೇಕಿದೆ. ಅದಕ್ಕಾಗಿಯೇ ಫ್ಯೂಡಲ್ ರಾಜಕಾರಣಿಗಳನ್ನು ಎತ್ತಿಕಟ್ಟುವ ಕೆಲಸ ನಡೆದಿದೆ" ಎಂದು ಹೇಳಿದರು.
"ಪ್ರಹ್ಲಾದ್ ಜೋಷಿ, ಈಶ್ವರಪ್ಪ ಮತ್ತಿತರ ಹಿರಿಯ ನಾಯಕರು ಯತ್ನಾಳರ ಹೇಳಿಕೆಯನ್ನು ಸಮರ್ಥಿಸುತ್ತಾರೆ. ಹಾಗಾಗಿ ಆರಾಜಕತೆ ಸೃಷ್ಟಿಸಲು ಯತ್ನಿಸಲಾಗುತ್ತಿದೆ. ದೊರೆಸ್ವಾಮಿ ಅವರನ್ನು ಟೀಕಿಸುವ ಹಕ್ಕಿದೆ. ಟೀಕಿಸುವ ಭರದಲ್ಲಿ ಪಾಕಿಸ್ತಾನ್ ಏಜೆಂಟ್ ಎಂದೆಲ್ಲಾ ಬಾಯಿಗೆ ಬಂದಂತೆ ಮಾತನಾಡುವುದು ಸೂಕ್ತವಲ್ಲ. ಬಸನಗೌಡ ಪಾಟೀಲರಂತಹ ಫ್ಯೂಡಲ್ ರಾಜಕಾರಣಿಯನ್ನು ದೊರೆಸ್ವಾಮಿ ಅಂತಹ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಎತ್ತಿಕಟ್ಟಲಾಗುತ್ತಿದೆ. ಆ ಮುಖಾಂತರ ಹಂತಕರ ಪಡೆಯನ್ನು ಬೆಳೆಸುತ್ತಿದ್ದಾರೆ" ಎಂದು ತಿಳಿಸಿದರು.