ನವದೆಹಲಿ, ಮಾ.02 (DaijiworldNews/PY) : "ಬಿಜೆಪಿಯು, ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಪ್ರತಿಯೊಬ್ಬ ಶಾಸಕರನ್ನು 25ರಿಂದ 35 ಕೋಟಿ ನೀಡಿ ಖರೀದಿಸಲು ಪ್ರಯತ್ನಿಸುತ್ತಿದೆ" ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
"ನರೊತ್ತಮ್ ಮಿಶ್ರಾ ಅವರು ಉಪಮುಖ್ಯಮಂತ್ರಿಯಾಗುವ ಹಾಗೂ ಶಿವರಾಜ್ ಸಿಂಗ್ ಚೌಹ್ವಾನ್ ಅವರು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. 15 ವರ್ಷಗಳ ಕಾಲ ಇವರು ರಾಜ್ಯವನ್ನು ಲೂಟಿ ಹೊಡೆದಿದ್ದಾರೆ. 25ರಿಂದ 35 ಕೋಟಿ ಹಣ ನೀಡಿ ಈಗ ಶಾಸಕರ ಖರೀದಿಗೆ ಮುಂದಾಗಿದ್ದಾರೆ. 5 ಕೋಟಿ ಮೊದಲ ಹಂತವಾಗಿ ನೀಡುವುದು ಹಾಗೂ ರಾಜ್ಯಸಭಾ ನಾಮನಿರ್ದೇಶನದ ಬಳಿಕ ಎರಡನೇ ಕಂತನ್ನು ನೀಡುವುದು. ಉಳಿದ ಹಣವನ್ನು ಅಂತಿಮವಾಗಿ ಸರ್ಕಾರ ಕೆಡವಿದ ನಂತರ ನೀಡುವುದ ಎಂಬ ಮಾತಾಗಿದೆ" ಎಂದರು.
"ಅದಾಗಿಯೂ, ಕರ್ನಾಟಕದ ಶಾಸಕರು ಮಾರಾಟವಾದಂತೆ, ಮಧ್ಯಪ್ರದೇಶದ ಶಾಸಕರು ಮಾರಾಟವಾಗುವುದಿಲ್ಲ. ನಾನು ಯಾವುದೇ ಸಾಕ್ಷ್ಯವಿಲ್ಲದೇ ಯಾವುದೇ ಆರೋಪಗಳನ್ನು ಮಾಡುವುದಿಲ್ಲ" ಎಂದು ತಿಳಿಸಿದರು.
ದಿಗ್ವಿಜಯ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ವಿರೋಧ ಪಕ್ಷದ ನಾಯಕ ಗೋಪಾಲ್ ಭಾರ್ಗವ್ ಅವರು, "ನನ್ನನ್ನು ಯಾರೊಬ್ಬರೂ ಸಂಪರ್ಕಿಸಿಲ್ಲ. ಪಕ್ಷಕ್ಕೆ ಅವರ ಇಚ್ಚೆಯ ಅನುಸಾರ ಬರುವುದಾದರೆ ಅವರಿಗೆ ಸ್ವಾಗತ. ದಿಗ್ವಿಜಯ್ ಸಿಂಗ್ ಅವರ ಬಳಿ ಸಾಕ್ಷ್ಯವಿದ್ದರೆ ಅದನ್ನು ಸಾರ್ವಜನಿಕರ ಮುಂದಿಡಲಿ" ಎಂದು ಹೇಳಿದರು.
ದಿಗ್ವಿಜಯ್ ಸಿಂಗ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಶಿವರಾಜ್ ಸಿಂಗ್ ಚೌಹ್ವಾನ್ ಅವರು, ಸ"ದಾ ವಿಲಕ್ಷಣಗಳ ವಿಷಯಗಳಿಂದಲೇ ತುಂಬಿರುವ ಸಿಂಗ್ ಅವರ ಮನಸ್ಸನ್ನು ಯಾರೊಬ್ಬರಿಗೂ ಓದಲು ಸಾಧ್ಯವಿಲ್ಲ" ಎಂದು ವ್ಯಂಗ್ಯವಾಡಿದ್ದಾರೆ.