ಮೈಸೂರು, ಮಾ.02 (DaijiworldNews/PY) : "ಮೂಲ-ವಲಸಿಗ ಎಂಬುದು ಕಾಂಗ್ರೆಸ್ನಲ್ಲಿ ಇಲ್ಲ. ಇದು ಮಾದ್ಯಮದವರ ಸೃಷ್ಠಿ" ಎಂದು ಶಾಸಕ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮೂಲ ಕಾಂಗ್ರೆಸ್ಸಿಗರು ಸಿದ್ದರಾಮಯ್ಯ ಅವರ ವಿರುದ್ದ ದೂರು ನೀಡಿದ್ದಾರೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಯಾರೂ ಕೂಡಾ ಇಲ್ಲಿ ಬ್ರಾಂಡ್ ಅಲ್ಲ. ನಮ್ಮ ನೆರಳನ್ನೆ ನಂಬಲಾಗುವುದಿಲ್ಲ. ಒಂದೇ ಪಕ್ಷದಲ್ಲಿ 30-40 ವರ್ಷ ಇದ್ದವರು ಇದೀಗ ಬೇರೆ ಬೇರೆ ಪಾರ್ಟಿಗೆ ಹೋಗುತ್ತಿದ್ಧಾರೆ. ಹೊಸಬರನ್ನು ಬೆಳೆಸುತ್ತಿದ್ದಾರೆ, ಹಳಬರನ್ನು ಕೂರಿಸಿದ್ದಾರೆ. ಮುಂದೆ ಏನಾಗಲಿದೆ ಎಂದು ತಿಳಿಯಲಿದೆ" ಎಂದರು.
"ಎಲ್ಲರಿಗೂ ಬಿಜೆಪಿ ಸಂಸ್ಕೃತಿ ಗೊತ್ತು. ಅವರು ಓದಿದ ಪುಸ್ತಕದ ಸಂಸ್ಕೃತಿಯನ್ನು ಬದಲಾಯಿಸಲು ಆಗುತ್ತಾ. ನನ್ನ ವಿರುದ್ದ ಮಾತನಾಡಿದವನ ಮೇಲೆ ಕೇಸ್ ಹಾಕಿದ್ದೆ. ಅದು ನ್ಯಾಯಾಲಯದಲ್ಲಿದೆ" ಎಂದು ಹೇಳಿದರು.
ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ನಾನೊಬ್ಬ ಕಾಂಗ್ರೆಸ್ ಕಾರ್ಯಕರ್ತ, ಶಾಸಕನಾಗಿದ್ದೇನೆ. ಇದಕ್ಕೆ ಹೈಕಮಾಂಡ್ ಅಥವಾ ದಿನೇಶ್ ಗುಂಡೂರಾವ್ ಉತ್ತರಿಸಬಲ್ಲರು" ಎಂದು ತಿಳಿಸಿದರು.