ಬೆಂಗಳೂರು, ಮಾ.02 (DaijiworldNews/PY) : "ಸರ್ಕಾರವು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಬಹುನಿರೀಕ್ಷಿತ ಟೆಕ್ ಪಾರ್ಕ್ ನಿರ್ಮಿಸಲು ಉದ್ದೇಶಿಸಿದ್ದು, ಇದರೊಂದಿಗೆ ಉದಯೋನ್ಮುಖ ಕ್ಷೇತ್ರದ ಅಭಿವೃದ್ದಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು" ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ಧಾರೆ.
ನಗರದ ಹೋಟೆಲ್ ಲಲಿತ್ ಅಶೋಕದಲ್ಲಿ ಹಮ್ಮಿಕೊಂಡ ಮೂರು ದಿನಗಳ ಬೆಂಗಳೂರು ಇಂಡಿಯಾ ನ್ಯಾನೊ-2020ರ 11ನೇ ಆವೃತ್ತಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, "ನ್ಯಾನೊ ತಂತ್ರಜ್ಞಾನ ಅಭಿವೃದ್ಧಿ ಸರ್ಕಾರದ ಆದ್ಯತೆಯಾಗಿದ್ದು, ಇದರೊಂದಿಗೆ ನ್ಯಾನೊ ರಾಜಧಾನಿಯನ್ನಾಗಿ ರೂಪಿಸಲಾಗುವುದು. ಮೂಲಸೌಕರ್ಯ, ಕೌಶಲ್ಯಯುತ ಮಾನವ ಸಂಪನ್ಮೂಲ ಪೂರೈಕೆ ಒಳಗೊಂಡಂತೆ ರಾಜ್ಯದಲ್ಲಿ ಈ ಕ್ಷೇತ್ರದ ಉತ್ತೇಜನಕ್ಕೆ ಪೂರಕ ವಾತಾವರಣ ನಿರ್ಮಿಸಲಾಗುವುದು" ಎಂದು ಹೇಳಿದರು.
"ವಿಜ್ಞಾನಿಗಳು ಹಾಗೂ ಎಂಜಿನಿಯರ್ಗಳು ಆಹಾರ, ಕೃಷಿ, ಇಂಧನ, ಜಲ ಶುದ್ಧೀಕರಣ, ಆರೋಗ್ಯ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ನ್ಯಾನೊ ತಂತ್ರಜ್ಞಾನದಲ್ಲಿ ಹೆಚ್ಚು ಆವಿಷ್ಕಾರ ನಡೆಸುವ ಅವಶ್ಯಕತೆ ಇದೆ. ಅತಿ ಹೆಚ್ಚು ಆದಾಯ ತಂದುಕೊಡುತ್ತಿರುವ ನಾಲ್ಕನೇ ರಾಜ್ಯವೂ ಆಗಿದೆ" ಎಂದು ತಿಳಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ಪಾರ್ಕ್ಗೆ ನಗರದ ಬಳ್ಳಾರಿ ರಸ್ತೆಯಲ್ಲಿ ಜಾಗ ಗುರುತಿಸಲಾಗಿದೆ. ವಿಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಮೂಲಗಳ ಪ್ರಕಾರ ದೇವನಹಳ್ಳಿ ಬಳಿ 15 ಎಕರೆ ಜಾಗ ಇದ್ದು, ಅಲ್ಲಿ ಈ ಪಾರ್ಕ್ ನಿರ್ಮಾಣವಾಗಲಿದೆ" ಎಂದರು.
ಪ್ರೊ.ಸಿ.ಎನ್.ಆರ್.ರಾವ್ ಮಾತನಾಡಿ, "ನ್ಯಾನೊ ತಂತ್ರಜ್ಞಾನವು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದೆ. ಇದರ ಬಳಕೆ ಹೆಚ್ಚಾಗಬೇಕು. ಈ ಬಗ್ಗೆ ಯುವ ವಿಜ್ಞಾನಿಗಳು ಹೆಚ್ಚಿನ ಸಂಶೋಧನೆಗಳ ಮೂಲಕ ವೈದ್ಯಕೀಯ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು" ಎಂದು ತಿಳಿಸಿದರು.
"ಈ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನವು, ಸಂಶೋಧನೆ, ವೈದ್ಯಕೀಯ, ಶೈಕ್ಷಣಿಕ ಸೇರಿದಂತೆ ಅಭಿವೃದ್ದಿಯಾಗುತ್ತಿರುವ ಉದ್ಯಮಗಳ ಅವಕಾಶ ಸೇರಿದಂತೆ ಹಲವು ವಿಚಾರಗಳ ಚರ್ಚೆಗೆ ಜಾಗತಿಕ ವೇದಿಕೆಯಾಗಿದೆ. ಈ ಬಾರಿಯ ಸಮ್ಮೇಳನ ಇ-ಮೊಬಿಲಿಟಿ, ಕೃಷಿ, ಶುದ್ಧ ನೀರು, ಪರಿಸರ, ಉತ್ಪಾದನೆಯಲ್ಲಿ ನ್ಯಾನೋ ತಂತ್ರಜ್ಞಾನವನ್ನು ಕೇಂದ್ರೀಕರಿಸಿದೆ" ಎಂದರು.
ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, "ರಾಜ್ಯ ಸರ್ಕಾರವು ತಕ್ಷಣ ವಿಜ್ಞಾನ ಹಾಗೂ ತಂತ್ರಜ್ಞಾನ ನೀತಿ ಜಾರಿಗೆ ಬರಲಿದೆ. ಸಂಶೋಧನೆ ಹಾಗೂ ಅಭಿವೃದ್ಧಿಗೆ ಅದರಲ್ಲಿ ಪೂರಕವಾದ ಹಲವಾರು ಅಂಶಗಳು ಇರಲಿವೆ. ಪ್ರೊ.ಸಿ.ಎನ್.ಆರ್.ರಾವ್ ಮಾರ್ಗದರ್ಶನದ ವಿಜನ್ ಗ್ರೂಪ್ ನೀತಿ-ನಿರೂಪಣೆಯಲ್ಲಿ ನೆರವಾಗಲಿದೆ. ನ್ಯಾನೊ ತಂತ್ರಜ್ಞಾನದ ಹಬ್ ಮಾಡಲು ಐಐಎಸ್ಸಿ, ಐಐಟಿ ಸೇರಿದಂತೆ ಹಲವು ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ನೆರವು ಪಡೆದುಕೊಳ್ಳಲಾಗುವುದು" ಎಂದರು.
ಈ ಸಂದರ್ಭ ನ್ಯಾನೋ ತಂತ್ರಜ್ಞಾನದ ಉತ್ತಮ ಸಂಶೋಧನೆಗಾಗಿ ಐಐಎಸ್ಸಿ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪಿ.ಎಸ್. ಅನಿಲ್ ಕುಮಾರ್ ಅವರಿಗೆ ಪ್ರೊ.ಸಿ.ಎನ್.ಆರ್.ರಾವ್ ಬೆಂಗಳೂರು ಇಂಡಿಯಾ ನ್ಯಾನೋ ವಿಜ್ಞಾನ ಪ್ರಶಸ್ತಿ 2020 ಪ್ರದಾನ ಮಾಡಲಾಯಿತು.