ಬೆಂಗಳೂರು, ಮಾ 02 (DaijiworldNews/SM): ದೇಶದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆಡಿರುವ ಮಾತುಗಳು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಈ ನಡುವೆ ರಾಜ್ಯದೆಲ್ಲೆಡೆ ಆಕ್ರೋಶದ ಕಿಚ್ಚು ಹೊತ್ತಿಕೊಳ್ಳುತ್ತಿದೆ. ಈ ಹೇಳಿಕೆಯ ಬಗ್ಗೆ ನಾನು ಕ್ಷಮೆಯಾಚಿಸಲ್ಲ ಎಂದು ಶಾಸಕರು ಈಗಾಗಲೇ ಹೇಳಿಕೊಂಡಿದ್ದಾರೆ. ಅಲ್ಲದೆ ಕೆಲವು ಸಚಿವರು ಕೂಡ ಇವರ ಪರವಾಗಿ ಬ್ಯಾಟ್ ಬೀಸಿದ್ದಾರೆ. ಪರಿಣಾಮ ಮೊದಲ ದಿನದ ಬಜೆಟ್ ಅಧಿವೇಶನವನ್ನೇ ಈ ವಿಚಾರ ನುಂಗಿ ಹಾಕಿದೆ.
ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳು ಇದೇ ವಿಚಾರವನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡರು. ಇದರಿಂದಾಗಿ ಬೆಳಿಗ್ಗೆಯಿಂದ ಸಂಜೆವರೆಗೆ ವಿಧಾನಸಭೆ ಗೊಂದಲದ ಗೂಡಾಗಿತ್ತು. ಅರೋಪ ಪ್ರತ್ಯಾರೋಪದಲ್ಲೇ ಆಡಳಿತ ಹಾಗೂ ಪ್ರತಿಪಕ್ಷಗಳು ಕಾಲಹರಣ ಮಾಡಿದವು. ಇಡೀ ದಿನದ ಕಲಾಪ ಕೇವಲ ಆರೋಪ, ಪ್ರತಿಭಟನೆ, ಘೋಷಣೆಗಳಿಂದಾಗಿ ಕಲಾಪ ಗದ್ದಲದ ಗೂಡಾಗಿ ಪರಿಣಮಿಸಿ, ದಿನದಂತ್ಯಕ್ಕೆ ಯಾವುದೇ ಮಹತ್ವದ ನಿರ್ಣಯ ಕೈಗೊಳ್ಳಲಾಗದೆ ಅಂತ್ಯಗೊಂಡಿತು.
ಇನ್ನು ಸದನ ಆರಂಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಚರ್ಚೆಗೆ ಅವಕಾಶ ಕೇಳಿದ ಸಂದರ್ಭ ಅವಕಾಶ ಕಲ್ಪಿಸಲಾಯಿತು. ಅಲ್ಲದೆ, ಸಿಎಂ ಬಿಎಸ್ ಯಡಿಯೂರಪ್ಪ ಕೂಡ ಚರ್ಚೆಗೆ ಗ್ರೀನ್ ಸಿಗ್ನಲ್ ನೀಡಿದರು. ಹಾಗೂ ಸರಕಾರ ಈ ವಿಚಾರಕ್ಕೆ ಸಂಬಂಧಿಸಿದಂತೆ ತಕ್ಕ ಉತ್ತರ ನೀಡಲಿದೆ ಎಂದರು. ನೋಟೀಸ್ ನೀಡಿ ಚರ್ಚೆ ನಡೆಸಿ ಸರಕಾರ ಕೂಡ ಇದಕ್ಕೆ ಸಿದ್ದ ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಪರಸ್ಪರ ದಿಕ್ಕಾರ, ದಿಕ್ಕಾರ ಎಂಬ ಘೋಷಣೆಗಳನ್ನು ಕೂಗುತ್ತಲೇ ಇದ್ದರು, ಪರಿಣಾಮ ಕಲಾಪ ನಡೆಸಲು ಸಾಧ್ಯವಾಗದೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಗದ್ದಲದ ನಡುವೆಯೇ ವಿಧಾನಸಭೆಯ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.
ಇನ್ನು ಅತ್ತ ವಿಧಾನಪರಿಷತ್ ಕಲಾವನ್ನೂ ಕೂಡ ಇದೇ ವಿಚಾರ ನುಂಗಿಹಾಕಿತು. ಪರಿಷತ್ ಕಲಾಪದಲ್ಲೂ ಆರೋಪ ಪ್ರತ್ಯಾರೋಪದಿಂದಾಗಿ ದಿನದ ಕಲಾಪ ನಡೆಯದೆ ಮಂಗಳವಾರಕ್ಕೆ ಮುಂದೂಡಲಾಯಿತು.