ನವದೆಹಲಿ, ಮಾ 2 (Daijiworld News/MSP): ವಿಶ್ವಾದ್ಯಂತ ಭೀತಿ ಸೃಷ್ಟಿಸಿ ೩೦೦೦ ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಕೊರೊನಾ ವೈರಸ್ ಭಾರತದಲ್ಲೂ ಪತ್ತೆಯಾಗಿದ್ದು 5 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಮಾತ್ರವಲ್ಲದೆ ಕೊರೊನಾ ಸೋಂಕು ಕರ್ನಾಟಕಕ್ಕೂ ಪ್ರವೇಶಿಸಿದ್ದು, ಅಪಾಯ ಮನೆ ಬಾಗಿಲಿಗೆ ಬಂದಂತಾಗಿದೆ.
ಕೇರಳ ಮೂವರಿಗೆ ಸೋಂಕು ತಗಲಿ ಗುಣಮುಖರಾಗಿ ಮನೆಗೆ ತೆರಲಿದ ಬೆನ್ನಲ್ಲೇ , ಹೈದರಾಬಾದ್ಗೆ ತೆರಳಿದ್ದ ಬೆಂಗಳೂರಿನ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರಿಗೆ ಸೋಂಕು ತಗಲಿರುವುದು ದೃಢ ಪಟ್ಟಿದೆ. ಇದನ್ನು ತೆಲಂಗಾಣದ ಆರೋಗ್ಯ ಸಚಿವರು ಖಚಿತಪಡಿಸಿದ್ದಾರೆ.
ಸದ್ಯ 24 ವರ್ಷದ ಈ ಎಂಜಿನಿಯರ್ಗೆ ಹೈದರಾಬಾದ್ನ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದೂ ಅಲ್ಲಿನ ಆರೋಗ್ಯ ಸಚಿವ ಇ.ರಾಜೇಂದರ್ ತಿಳಿಸಿದ್ದಾರೆ. ಇದರೊಂದಿಗೆ ದಿಲ್ಲಿ ಮತ್ತು ತೆಲಂಗಾಣದಲ್ಲಿ ಎರಡು ಹೊಸ ಪ್ರಕರಣ ಪತ್ತೆಯಾಗಿದೆ.
ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿ ದುಡಿಯುತ್ತಿದ್ದ ಯುವಕ ಇತ್ತೀಚೆಗಷ್ಟೇ ದುಬಾೖಗೆ ಪ್ರವಾಸ ತೆರಳಿದ್ದರು. ಅಲ್ಲಿ ಹಾಂಕಾಂಗ್ ಮೂಲದ ಕೆಲವು ವ್ಯಕ್ತಿಗಳ ಜತೆಗೆ ಕೆಲಸ ಮಾಡಿದ್ದರು. ಅಲ್ಲಿಂದ ಬೆಂಗಳೂರಿಗೆ ಫೆ.19-20ರಂದು ವಾಪಸಾಗಿ, ಬಳಿಕ ಹೈದರಾಬಾದ್ಗೆ ಬಸ್ನಲ್ಲಿ ಪ್ರಯಾಣಿಸಿದ್ದರು. ಹೈದರಾಬಾದ್ ತಲುಪಿದ ಬಳಿಕ ಜ್ವರ ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇವರ ರಕ್ತದ ಮಾದರಿಯನ್ನು ಪುಣೆಗೆ ಕಳುಹಿಸಿಕೊಡಲಾಗಿದ್ದು, ಪಾಸಿಟಿವ್ ಬಂದ ಕಾರಣ ಎಚ್ಚರಿಕೆ ವಹಿಸಲಾಗಿದೆ
ಈತ ದಾಖಲಾಗಿದ್ದ ಆಸ್ಪತ್ರೆ ವೈದ್ಯರು, ಅಲ್ಲಿಕೆಲಸ ಮಾಡುತ್ತಿದ್ದ ಸಿಬಂದಿ, ಇವರೊಂದಿಗೆ ಸಂಪರ್ಕದಲ್ಲಿದ್ದ ಕುಟುಂಬ ಸದಸ್ಯರು, ಯುವಕನ ಜತೆಗೆ ಬಸ್ನಲ್ಲಿ ಪ್ರಯಾಣಿಸಿದ್ದವರ ಮೇಲೂ ತೀವ್ರ ನಿಗಾ ವಹಿಸಲಾಗಿದೆ. ಒಟ್ಟಾರೆ 80 ಮಂದಿಯನ್ನು ಗುರುತಿಸಲಾಗಿದೆ. ಜತೆಗೆ ಈ ಯುವಕ ಕೆಲಸ ಮಾಡುತ್ತಿದ್ದ ಬೆಂಗಳೂರಿನ ಕಂಪೆನಿ ಮತ್ತು ಕರ್ನಾಟಕ ಸರಕಾರದ ಜತೆಗೂ ಮಾಹಿತಿ ಹಂಚಿಕೊಳ್ಳಲಾಗಿದೆ ಎಂದು ತೆಲಂಗಾಣ ಆರೋಗ್ಯಇಲಾಖೆ ತಿಳಿಸಿದೆ.