ನವದೆಹಲಿ, ಮಾ 2 (Daijiworld News/MSP): ಪ್ರಧಾನಿ ನರೇಂದ್ರ ಮೋದಿ ಸೋಶಿಯಲ್ ಮೀಡಿಯಾ ವೇದಿಕೆಯಿಂದ ಹೊರ ಹೋಗುತ್ತಿರುವುದಾಗಿ ಹೇಳಿ ಎಲ್ಲರಿಗೂ ಅಚ್ಚರಿ ಉಂಟು ಮಾಡಿದ್ದಾರೆ. ಬರುವ ಭಾನುವಾರದಿಂದ ಟ್ವಿಟರ್ , ಫೇಸ್ ಬುಕ್ , ಇನ್ ಸ್ಟಾಗ್ರಾಂ ಮತ್ತು ಯೂ ಟ್ಯೂಬ್ ನಿಂದ ದೂರ ಉಳಿಯುವ ಬಗ್ಗೆ ಚಿಂತನೆ ನಡೆಸುವುದಾಗಿ ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ.
ಸೋಶಿಯಲ್ ಮೀಡಿಯಾ ವೇದಿಕೆಯಿಂದ ಹೊರ ಹೋಗುತ್ತಿದ್ದೇನೆ ಎಂದು ರಾತ್ರಿ 8.56ರ ಸುಮಾರಿಗೆ ಅವರು ಸೋಶಿಯಲ್ ಮೀಡಿಯಾ ಮೂಲಕವೇ ಘೋಷಣೆ ಮಾಡಿದ್ದಾರೆ. ಆದರೆ ಈ ಚಿಂತನೆಗೆ ಕಾರಣ ಏನು ಎಂಬುದನ್ನು ಹೇಳಿಲ್ಲ. ಅವರ ಈ ಟ್ವೀಟ್ ಅತಿ ಹೆಚ್ಚು ಪ್ರತಿಕ್ರಿಯೆಗಳ ಜೊತೆಗೆ ರೀ ಟ್ವೀಟ್ ಗಳನ್ನು ಕಂಡಿದೆ. ಅಲ್ಲದೆ ನೋ ಸರ್ ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.
ಸೋಶಿಯಲ್ ಮೀಡಿಯಾ ಮೂಲಕವೇ ಪ್ರಧಾನಿ ಮೋದಿ ಕೋಟ್ಯಂತರ ಜನರನ್ನು ತಲುಪಿದವರು. ಸಾಮಾಜಿಕ ಜಾಲತಾಣವನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡ ಏಕೈಕ ಪ್ರಧಾನಿ ಎಂಬ ಹೆಗ್ಗಳಿಕೆ ಮೋದಿಗಿದೆ. ಅಲ್ಲದೆ ಅವರ ಟ್ವಿಟರ್ ಖಾತೆಗೆ 5.33 ಕೋಟಿ ಫಾಲೋವರ್ ಗಳಿದ್ದಾರೆ. ಇದೀಗ ಅವರ ನಿರ್ಧಾರ ಎಲ್ಲರಿಗೂ ಅಚ್ಚರಿಗೆ ನೂಕಿದೆ.