ಬೆಂಗಳೂರು, ಮಾ 2 (Daijiworld News/MSP): ಹೈದರಬಾದ್ ಮೂಲದ ಬೆಂಗಳೂರಿನ ಟೆಕ್ಕಿಯೊಬ್ಬನಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಸೋಂಕು ಹರಡದಂತೆ ಸಮರ್ಪಕ ಕ್ರಮಗಳನ್ನು ಕೈಗೊಂಡಿದೆ ಎಂದು ರಾಜ್ಯದ ಆರೋಗ್ಯ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.
ಹೈದರಾಬಾದಿನ ಕೊರೊನಾ ಸೋಂಕು ಪೀಡಿತ ವ್ಯಕ್ತಿಯು ಬೆಂಗಳೂರಿನಿಂದ ತೆರಳಿದ್ದಾಗಿ ತಿಳಿದುಬಂದಿದ್ದು, ಈ ವ್ಯಕ್ತಿಯ ಸ್ಥಳೀಯ ವಿಳಾಸದಲ್ಲಿ ನೆಲೆಸಿರುವ ಎಲ್ಲಾ ಸದಸ್ಯರನ್ನು ಈಗಾಗಲೇ ಗುರುತಿಸಿ, ಅವರ ಆರೋಗ್ಯದ ಮೇಲೆ ನಿಗಾವಹಿಸಲಾಗಿದೆ. ಇನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರ ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು, ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಮಾತ್ರವಲ್ಲದೆ ರಾಜ್ಯದಲ್ಲಿ ವೈರಸ್ ಹರಡದಂತೆ ಸರ್ಕಾರ ಎಲ್ಲಾ ರೀತಿಯ ಸಮರ್ಪಕ ಕ್ರಮಗಳನ್ನು ಕೈಗೊಂಡಿದೆ ಎಂದು ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.