ಬೆಂಗಳೂರು, ಮಾ 2 (Daijiworld News/MSP): ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ಹರಿಹಾಯ್ದಿದ್ದು, ಹತ್ತು ಖಡಕ್ ಪ್ರಶ್ನೆಗಳನ್ನು ಕೇಳುವ ಮೂಲಕ ಉತ್ತರ ಕೊಡಿ ಬಿಎಸ್ ವೈ ಎಂದು ಟ್ವಿಟರ್ ನಲ್ಲಿ ಸಿಎಂಗೆ ನೇರ ಸವಾಲು ಹಾಕಿದ್ದಾರೆ.
1. ಸಮಾಜದ ಶಾಂತಿ ಕದಡುವಂತಹಾ ಪ್ರಚೋದನಕಾರಿ ದ್ವೇಷ ಭಾಷಣ ಮಾಡಿದ ಸಂಸದ ಅನಂತ್ ಕುಮಾರ್, ನಳಿನ್ ಕುಮಾರ್ ಕಟೀಲ್, ಬಿಎಲ್ ಸಂತೋಷ್, ಸಿ.ಟಿ ರವಿ, ಯತ್ನಾಳ್, ಡಾ. ಅಶ್ವತ್ ನಾರಾಯಣ , ಸೋಮಶೇಖರ ರೆಡ್ಡಿ ಸೇರಿದಂತೆ ಇತರೆ ಯಾರ ವಿರುದ್ಧವೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ?
2.ನಾಡಿನ ಸಾಕ್ಷಿಪ್ರಜ್ಞೆ, ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿಯವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವ, ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸುವ ಇಚ್ಚಾಶಕ್ತಿ ನಿಮ್ಮ ಸರ್ಕಾರಕ್ಕಿಲ್ಲ ಏಕೆ?
3. ನೆರೆ ಪರಿಹಾರಕ್ಕೆ ಕೇಂದ್ರದಿಂದ ನೀವು ಕೇಳಿದ ಹಣವೆಷ್ಟು ? ಅವರು ಕೊಟ್ಟಿದ್ದೆಷ್ಟು? ಮತ್ತೆ ಏಕೆ ತಾವು ಒತ್ತಡ ಹೇರಿ ಹಣ ತರುತ್ತಿಲ್ಲ. ಈ ವಿಷಯದಲ್ಲಿ ಇಪ್ಪತ್ತೈದು ಸಂಸದರು ನಾಪತ್ತೆ ಏಕೆ ?
4. ಹಿಂದಿನ ಸರ್ಕಾರಗಳ ಜನಪರ ಯೋಜನೆಗಳಾದ ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವ ಪ್ರಯತ್ನ, ಅನ್ನಭಾಗ್ಯ ಅಕ್ಕಿ ಕಡಿತ, ವಸತಿ ಯೋಜನೆಗಳ ನಿರ್ಲಕ್ಷ್ಯ, ರೈತರ ಸಾಲದ ಕಂತುಗಳನ್ನು ಸಕಾಲಕ್ಕೆ ಪಾವತಿಸದಿರುವುದು,ಈ ರೀತಿಯ ಕೀಳು ಮಟ್ಟದ ದ್ವೇಷ ರಾಜಕಾರಣ ಏಕೆ?
5. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಬಾಕಿ, ನರೇಗಾ ಹಣ, ಯೋಜನೆಗಳ ಹಣ ಸೇರಿದಂತೆ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ಸಾವಿರಾರು ಕೋಟಿ ಬಾಕಿ ಹಣವನ್ನು ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹೇರುತ್ತಿಲ್ಲ ಏಕೆ?
6. ಸಿ.ಎ.ಎ/ಎನ್.ಆರ್.ಸಿ ವಿರೋಧಿಸಿ ರಾಜ್ಯದಲ್ಲಿ ಶಾಂತಿಯುತವಾಗಿ ಪ್ರತಿಭಟನೆಗಳು ನಡೆಯುತ್ತಿದ್ದಾಗ ಅನಗತ್ಯವಾಗಿ ರಾಜ್ಯಾದ್ಯಂತ ನಿಷೇಧಾಜ್ಞೆ (144) ಹೇರಿದ್ದು ಏಕೆ?
7. ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಯಲ್ಲಿ ಬಾಬರಿ ಮಸೀದಿ ಧ್ವಂಸದ ಪ್ರದರ್ಶನ ನಡೆಸಿದರೂ ಯಾವುದೇ ಕ್ರಮವಿಲ್ಲ, ಆದರೆ, ಶಾಸಕ ಯು.ಟಿ.ಖಾದರ್ , ಶಾಹಿನ್ ಶಾಲೆಯಲ್ಲಿ ನಾಟಕ ಪ್ರದರ್ಶಿಸಿದ ಮಕ್ಕಳು, ಶಿಕ್ಷಕರು, ಪಾಲಕರ ವಿರುದ್ಧವು ದೇಶದ್ರೊಹ ಪ್ರಕರಣ ದಾಖಲಿಸಿದ್ದು ಏಕೆ?
8. ಭೀಕರ ನೆರೆ ಹಾವಳಿಗೆ ತುತ್ತಾದ ಪ್ರದೇಶಗಳಲ್ಲಿ ಇದುವರೆಗೂ ನೆರೆ ಪರಿಹಾರ, ಪುನರ್ವಸತಿ, ನಷ್ಟ ಪರಿಹಾರ ಕಾರ್ಯಗಳು ಸಮರ್ಪಕವಾಗಿ ಪೂರ್ಣಗೊಂಡಿಲ್ಲ ಏಕೆ?
9. ರಾಜ್ಯದಾದ್ಯಂತ ಸ್ವಯಂಪ್ರೇರಿತವಾಗಿ ವಿದ್ಯಾರ್ಥಿ - ಯುವಜನರು, ಸಾಮಾಜಿಕ ಹೋರಾಟಗಾರರು, ಕವಿ ಸಾಹಿತಿಗಳು, ಸಾಮಾನ್ಯ ಜನರು ಬೀದಿಗಿಳಿದು ತೀವ್ರ ಪ್ರತಿಭಟನೆಗಳು, ಹೋರಾಟಗಳು ನಡೆದರೂ ಈ ಜನಾಭಿಪ್ರಾಯವನ್ನು ಗೌರವಿಸಿ ರಾಜ್ಯದಲ್ಲಿ ಎನ್.ಆರ್.ಸಿ/ಸಿಎಎ/ಎನ್.ಪಿ.ಆರ್ ಜಾರಿ ಮಾಡುವುದಿಲ್ಲ ಎಂಬ ನಿರ್ಣಯ ಕೈಗೊಂಡಿಲ್ಲ ಏಕೆ?
10. ಮಂಗಳೂರು ಗಲಭೆ ಮತ್ತು ಗೋಲಿಬಾರ್, ಶೃಂಗೇರಿ ಸಾಹಿತ್ಯ ಸಮ್ಮೇಳನಕ್ಕೆ ಬಾಂಬ್ ಬೆದರಿಕೆ, ಶಾಸಕರ ಹತ್ಯೆ ಯತ್ನ, ಬೆಂಗಳೂರಿನ ಜೋತಿ ನಿವಾಸ್ ಕಾಲೇಜು ಪ್ರಕರಣ, ಪ್ರಮುಖ ವ್ಯಕ್ತಿಗಳಿಗೆ ಜೀವ ಬೆದರಿಕೆ ಸೇರಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದು ನಿಮ್ಮ ವೈಫಲ್ಯವಲ್ಲವೇ?