ಬೆಂಗಳೂರು, ಮಾ. 04 (Daijiworld News/MB) : ವಿಧಾನ ಪರಿಷತ್ನಲ್ಲೇ ಮಂಗಳವಾರ ಬಿಜೆಪಿ ಸದಸ್ಯ ಎನ್. ರವಿಕುಮಾರ್ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿರುದ್ಧ ಧಿಕ್ಕಾರ ಕೂಗಿದ್ದು ಇದರಿಂದಾಗಿ ವಿರೋಧ ಪಕ್ಷದ ಸದಸ್ಯರು ಧರಣಿ ನಡೆಸಿದರು. ಇದರಿಂದಾಗಿ ಮಂಗಳವಾರವೂ ಇಡೀ ದಿನ ಕಲಾಪ ನಡೆಯಲಿಲ್ಲ.
ಕಾಂಗ್ರೆಸ್ ಸದಸ್ಯ ಐವನ್ ಡಿಸೋಜ ಅವರು ದೊರೆಸ್ವಾಮಿ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಯತ್ನಾಳ್ ವಿರುದ್ಧ 23 ಪ್ರಕರಣಗಳು ದಾಖಲಾಗಿದೆ ಅವರನ್ನು ಬಂಧನ ಮಾಡಬೇಕು ಎಂದು ಆಗ್ರಹಿಸಿದರು.
ಆ ಸಂದರ್ಭದಲ್ಲಿ ಭಿತ್ತಿ ಫಲಕವನ್ನು ಕೈಯಲ್ಲಿ ಹಿಡಿದುಕೊಂಡು ಎದ್ದುನಿಂತ ರವಿಕುಮಾರ್, "ಸಾವರ್ಕರ್ ಅವರನ್ನು ಹೇಡಿ ಎಂದು ಕರೆದಿರುವ, ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಮುಗಿಸಿ ಎಂದು ಹೇಳಿರುವ ದೊರೆಸ್ವಾಮಿ ಅವರಿಗೆ ಧಿಕ್ಕಾರ, ಅವರಿಗೆ ನಾಚಿಕೆಯಾಗಬೇಕು" ಎಂದರು.
ಹಾಗೆಯೇ ತೇಜಸ್ವಿನಿ ಗೌಡ ಅವರು, "ಪ್ರಧಾನಿ ಮೋದಿ ಅವರನ್ನು ಮುಗಿಸಿ ಎಂದು ಹೇಳಿದವರಿಗೆ ಬೆಂಬಲ ನೀಡುತ್ತಿದ್ದೀರಿ" ಎಂದು ಹೇಳಿದರು. ವೈ.ಎ. ನಾರಾಯಣಸ್ವಾಮಿ ಅವರೂ ಕೂಗಾಡಿದರು.
ಈ ಹಂತದಲ್ಲಿ ಕ್ರಿಯಾಲೋಪ ಎತ್ತಿದ ಜೆಡಿಎಸ್ನ ಕೆ.ಟಿ.ಶ್ರೀಕಂಠೇಗೌಡ, ಸದಸ್ಯರೊಬ್ಬರು ಮಾತನಾಡುತ ದೊರೆಸ್ವಾಮಿ ಬಗ್ಗೆ ಧಿಕ್ಕಾರ ಕೂಗಿದ್ದು ಸರಿಯಲ್ಲ, ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಆದರೆ ಕ್ಷಮೆ ಕೇಳಲು ಒಪ್ಪದ ರವಿಕುಮಾರ್ ಅವರು , "ಸಾವರ್ಕರ್, ಮೋದಿಗೆ ಅವಹೇಳನ ಮಾಡಿದವರ ವಿರುದ್ಧ ತಾವು ಆಡಿದ್ದು ಸರಿ" ಎಂದರು. ಸಭಾಪತಿ ಪೀಠದ ಮುಂಭಾಗಕ್ಕೆ ವಿರೋಧ ಪಕ್ಷದ ಸದಸ್ಯರು ಧಾವಿಸಿ ಪ್ರತಿಭಟನೆ ನಡೆಸಿದ್ದರಿಂದ ಕಲಾಪವನ್ನು ಮುಂದೂಡಲಾಯಿತು.
ಮಧ್ಯಾಹ್ನ ಮತ್ತೆ ಕಲಾಪ ಆರಂಭವಾದಾಗ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಅವರು ಕಡತದಲ್ಲೇ ಸೇರಿಕೊಂಡಿರುವ ರವಿಕುಮಾರ್ ಮತ್ತು ತೇಜಸ್ವಿನಿ ಗೌಡ ಅವರು ಆಡಿರುವ ಮಾತುಗಳನ್ನು ಉಲ್ಲೇಖಿಸಿದರು. ಕ್ಷಮೆ ಕೇಳದಿದ್ದರೆ ಪ್ರತಿಭಟನೆ ಮುಂದುವರಿಯಲಿದೆ ಎಂದರು. ಹಾಗೆಯೇ ಕ್ಷಮೆ ಕೇಳದಿದ್ದರೆ ರವಿಕುಮಾರ್ ಅವರನ್ನು ಸದನದಿಂದ ಅಮಾನತು ಮಾಡಬೇಕು ಎಂದರು.
ಕ್ಷಮೆಯಾಚಿಸಲು ರವಿಕುಮಾರ್ ನಿರಾಕರಿಸಿದ್ದು ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಅವರು ಕಲಾಪವನ್ನು ಬುಧವಾರ ಬೆಳಿಗ್ಗೆ 11 ಗಂಟೆಗೆ ಮುಂದೂಡಿದರು.