ಬೆಂಗಳೂರು, ಮಾ. 04 (Daijiworld News/MB) : "ಕಾನೂನಿಗಿಂತ ಸಿದ್ದರಾಮಯ್ಯ ಮಿಗಿಲಲ್ಲ. ನೀವು ಸದನ ನಡೆಸಲು ಬಿಡುವುದಿಲ್ಲ ಎಂದು ಹೊರಗೆ ಹೇಳಿದ್ದೀರಿ, ನಾವು ಕಳ್ಳೇಪುರಿ ತಿನ್ನಲು ಬಂದು ಕುಳಿತಿಲ್ಲ" ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೊರೆಸ್ವಾಮಿ ಅವರಿಗೆ ಅವಮಾನ ಮಾಡಿದ ವಿಷಯಕ್ಕೆ ಸಂಬಂಧಿಸಿ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ನಡುವೆ ವಾಗ್ವಾದ ನಡೆಯಿತು.
"ಕರ್ನಾಟಕ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ವಿರೋಧಿಯಾಗಿದ್ದು ಸರ್ವಾಧಿಕಾರಿ ಧೋರಣೆಯಿಂದ ಆಡಳಿತ ನಡೆಸುತ್ತಿದೆ. ಸ್ವಾತಂತ್ಯ್ರಕ್ಕಾಗಿ ಹೋರಾಟ ನಡೆಸಿದ ದೊರೆಸ್ವಾಮಿಯವರನ್ನು ಟೀಕೆ ಮಾಡಿದವರನ್ನೇ ಸಮರ್ಥಿಸುತ್ತಿದೆ. ಸದನದಿಂದ ಯತ್ನಾಳ್ ಅವರನ್ನು ಸಸ್ಪೆಂಡ್ ಮಾಡಬೇಕು" ಎಂದು ಸಿದ್ಧರಾಮಯ್ಯ ಅವರು ಆಗ್ರಹಿಸಿದರು.
"ಸದನ ನಡೆಯಬಾರದು ಎಂಬುದು ಸಂಘ ಪರಿವಾರದ ಹುನ್ನಾರ. ಹಾಗಾಗಿ ಬಿಜೆಪಿ ನಾಯಕರು ದೊರೆಸ್ವಾಮಿ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ವಿಧಾನಪರಿಷತ್ ಸದಸ್ಯ ರವಿಕುಮಾರ್ ಅವರು ಧಿಕ್ಕಾರ ಹಾಕಿರುವುದೂ ಇದೇ ಕಾರಣಕ್ಕೆ" ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಆಕ್ರೋಶಗೊಂಡ ಮಾಧುಸ್ವಾಮಿಯವರು, "ಸಿದ್ದರಾಮಯ್ಯ ಕಾನೂನಿಗಿಂತ ದೊಡ್ಡವರಲ್ಲ. ಅವರು ಈ ಸದನ ನಡೆಸಲು ಬಿಡುವುದಿಲ್ಲ ಎಂದು ಕೆಲವು ದಿನಗಳ ಹಿಂದೆ ಹೇಳಿದ್ದಾರೆ. ಹಾಗೆಯೇ ಸಭಾಧ್ಯಕ್ಷ ಸಣ್ಣ ಹುಡುಗ ಇದ್ದಾನೆ ಎಂದೂ ಹೇಳಿದ್ದಾರೆ. ಇಂತಹ ಮಾತುಗಳು ಖಂಡನಾರ್ಹ. ನಿಮ್ಮ ನಾಲಿಗೆಗೆ ಹಿಡಿತವಿರಲಿ ಎಂದು ಖಡಕ್ ಆಗಿ ಹೇಳಿದರು.
ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಾತನಾಡಿ, "ಈ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ ಮತ್ತು ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಸೋಲಿಸಿದ ನಿಮ್ಮಿಂದ ನಾವು ಪಾಠ ಕಲಿಯುವ ಅಗತ್ಯವಿಲ್ಲ. ಭಗವಂತ ಬಂದರೂ ಕಾಂಗ್ರೆಸ್ ಅನ್ನು ರಿಪೇರಿ ಮಾಡಲು ಸಾಧ್ಯವಿಲ್ಲ" ಎಂದು ಲೇವಡಿ ಮಾಡಿದರು.
ಸಂಘಪರಿವಾರದ ಬಗ್ಗೆ ಸಿದ್ದರಾಮಯ್ಯ ಅವರು ಮಾತನಾಡಿದಾಗ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮತ್ತು ಸಚಿವ ಸೋಮಣ್ಣ ಅವರು, ""ಎಲ್ಲ ವಿಷಯಗಳಿಗೂ ಸಂಘಪರಿವಾರವನ್ನು ಎಳೆದು ತರಬೇಡಿ" ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಶಾಸಕ ಎಂ.ಪಿ.ರೇಣುಕಾಚಾರ್ಯ, "ಸಿದ್ದರಾಮಯ್ಯ ಅವರು ಪ್ರಧಾನಿ ಅವರನ್ನು ನರಹಂತಕ ಎಂದು ಹೇಳಿಕೆ ನೀಡಿದ್ದಾರೆ, ಈ ಬಗ್ಗೆಯೂ ಚರ್ಚೆ ಆಗಲಿ" ಎಂದು ಹೇಳಿದರು.
ಇದಕ್ಕೆ ಜೊತೆಯಾದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, "ಸಾವರ್ಕರ್ ಮತ್ತು ಪ್ರಧಾನಿ ಮೋದಿ ವಿರುದ್ಧ ಹೇಳಿಕೆ ನೀಡಿದ ಸಿದ್ದರಾಮಯ್ಯ ಅವರನ್ನೂ ಸದನದಿಂದ ಸಸ್ಪೆಂಡ್ ಮಾಡಬೇಕು" ಎಂದು ಹೇಳಿದರು.