ಮುಂಬೈ, ಮಾ. 04 (Daijiworld News/MB) : ಮುಸ್ಲಿಮರಿಗೆ ಮೀಸಲಾತಿ ನೀಡಲು ಮುಂದಾಗದಿರುವ ವಿಚಾರವಾಗಿ ಕಾಂಗ್ರೆಸ್, ಎನ್ಸಿಪಿ ಪಕ್ಷಗಳು ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆದರೆ ಶಿವಸೇನಾಗೆ ಬೆಂಬಲ ನೀಡಲು ಸಿದ್ಧ ಎಂದು ಬಿಜೆಪಿ ನಾಯಕ ಸುಧೀರ್ ಮುಂಗತಿವಾರ್ ಹೇಳಿದ್ದಾರೆ.
ಮುಸ್ಲಿಮರಿಗೆ ಶಿಕ್ಷಣ ಕ್ಷೇತ್ರದಲ್ಲಿ ಶೇ 5ರ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿ "ಮಹಾ ವಿಕಾಸ್ ಅಘಾಡಿ" ಮೈತ್ರಿ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ತಲೆ ಎತ್ತಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಸುಧೀರ್ ಮುಂಗತಿವಾರ್ ಈ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ ಈ ಬಗ್ಗೆ ಮೀಸಲಾತಿ ವಿಚಾರವಾಗಿ ಮಾತನಾಡಿ, "ಮುಸ್ಲಿಮರಿಗೆ ಮೀಸಲಾತಿ ನೀಡುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ" ಎಂದು ಹೇಳಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಸುಧೀರ್, "ಉದ್ಧವ್ ಅವರು ಒಳ್ಳೆಯ ತೀರ್ಮಾನ ಮಾಡಿದ್ದಾರೆ. ಶಿವಸೇನಾ ಜತೆ ನಮ್ಮ ಮೈತ್ರಿಯು ಸಿದ್ಧಾಂತದ ತಳಹದಿಯಿಂದ ಕೂಡಿತ್ತು. ಕಾಂಗ್ರೆಸ್ ಮತ್ತು ಎನ್ಸಿಪಿಯಿಂದ ಮುಸ್ಲಿಂ ಮೀಸಲಾತಿ ವಿಚಾರದಲ್ಲಿ ಒತ್ತಡದ ಕುರಿತಾಗಿ ಸೇನಾ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಅವರು ಸರ್ಕಾರದಿಂದ ಹೊರ ನಡೆದರೂ ಈ ವಿಚಾರದಲ್ಲಿ ನಾವು ಸರ್ಕಾರದ ಬೆಂಬಲಕ್ಕೆ ನಿಲ್ಲಲಿದ್ದೇವೆ" ಎಂದು ಅವರು ತಿಳಿಸಿ ಧರ್ಮದ ಆಧಾರದಲ್ಲಿ ಮೀಸಲಾತಿ ಯಾಕೆ ನೀಡಬೇಕು ಎಂದು ಪ್ರಶ್ನಿಸಿದರು.
ಇತ್ತೀಚೆಗೆ ಮಹಾರಾಷ್ಟ್ರದ ಅಲ್ಪಸಂಖ್ಯಾತರ ವ್ಯವಹಾರಗಳ ಖಾತೆ ಸಚಿವ ನವಾಬ್ ಮಲಿಕ್ "ಮಹಾರಾಷ್ಟ್ರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಮುಸ್ಲಿಂ ಸಮುದಾಯದವರಿಗೆ ಶೇ 5ರಷ್ಟು ಮೀಸಲಾತಿ ನೀಡಲಾಗುವುದು" ಎಂದು ತಿಳಿಸಿದ್ದರು.
ಇದಕ್ಕೆ ವಿಶ್ವ ಹಿಂದೂ ಪರಿಷತ್ ವಿರೋಧ ವ್ಯಕ್ತಪಡಿಸಿತ್ತು. ಅದರ ಬೆನ್ನಲ್ಲೇ, ಈ ವಿಚಾರವಾಗಿ ಇನ್ನೂ ಯಾವುದೇ ನಿರ್ಧಾರವಾಗಿಲ್ಲ ಎಂದು ಮಹಾರಾಷ್ಟ್ರದ ಸಚಿವ ಏಕನಾಥ್ ಶಿಂಧೆ ಸ್ಪಷ್ಟಪಡಿಸಿದ್ದರು.