ಗುರುಗ್ರಾಮ, ಮಾ.04 (DaijiworldNews/PY) : ಮಧ್ಯ ಪ್ರದೇಶದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆ ಕಂಡುಬಂದಿದ್ದು, ಆಡಳಿತರೂಢ ಕಾಂಗ್ರೆಸ್ ಹಾಗೂ ಆ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದ 8 ಶಾಸಕರು ಬಿಜೆಪಿ ವಶದಲ್ಲಿರುವುದು ವರದಿಯಾಗಿದೆ. ಈ ಪೈಕಿ ಕಾಂಗ್ರೆಸ್, ಒಬ್ಬ ಶಾಸಕಿಯನ್ನು ವಾಪಾಸ್ ಕರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದೆ.
ಹರಿಯಾಣದ ಗುರುಗ್ರಾಮದಲ್ಲಿರುವ ಐಟಿಸಿ ರೆಸಾರ್ಟ್ನಲ್ಲಿ ಈ ಶಾಸಕರನ್ನು ಬಿಜೆಪಿ ಬಲವಂತವಾಗಿ ಹಿಡಿದಿಟ್ಟುಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಬಿಜೆಪಿ ವಶದಲ್ಲಿರುವ 8 ಶಾಸಕರ ಪೈಕಿ, ನಾಲ್ವರು ಕಾಂಗ್ರೆಸ್, ಒಬ್ಬ ಪಕ್ಷೇತರ ಹಾಗೂ ಇತರ ಮೂವರು ಎಸ್ಪಿ, ಬಿಎಸ್ಪಿಯವರು ಎಂಬುದಾಗಿ ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಮಧ್ಯ ಪ್ರದೇಶದ ಸಚಿವ, ಕಾಂಗ್ರೆಸ್ ನಾಯಕರಾದ ಜಿತು ಪಟ್ವಾರಿ ಹಾಗೂ ಜೈವರ್ಧನ್ ಸಿಂಗ್ ಅವರು ಐಟಿಸಿ ರೆಸಾರ್ಟ್ಗೆ ತೆರಳಿ ಉಚ್ಚಾಟಿತ ರಮಾಬಾಯಿ ಅವರೊಂದಿಗೆ ತೆರಳುತ್ತಿರುವ ವಿಡಿಯೋವನ್ನು ಮಾಧ್ಯಮವೊಂದು ಮಂಗಳವಾರ ತಡರಾತ್ರಿ ಟ್ವೀಟ್ ಮಾಡಿದೆ.
ನಮಗೆ ಮಾಹಿತಿ ದೊರೆತ ತಕ್ಷಣವೇ ಗುರುಗ್ರಾಮಕ್ಕೆ ಜಿತು ಪಟ್ವಾರಿ ಹಾಗೂ ಜೈವರ್ಧನ್ ಸಿಂಗ್ ತೆರಳಿದ್ದಾರೆ. ಈಗ ನಮ್ಮ ಜೊತೆ ಸಂಪರ್ಕದಲ್ಲಿರುವ ಶಾಸಕರು ಪುನಃ ಬರಲು ಒಪ್ಪಿದ್ದಾರೆ. ನಿನ್ನೆಯೇ ಬಿಸಾಹುಲಾಲ್ ಹಾಗೂ ರಮಾಬಾಯಿ ಜೊತೆ ಸಂಪರ್ಕ ಸಾಧಿಸಿದ್ದೆವು. ಬಿಜೆಪಿ ತಡೆಯಲು ಪ್ರಯತ್ನಿಸಿದ್ದರೂ ರಮಾಬಾಯಿ ಅವರು ನಮ್ಮೊಂದಿಗೆ ವಾಪಾಸ್ ಆಗಿದ್ದಾರೆ ಎಂಬುದಾಗಿ ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ತಿಳಿಸಿದ್ದಾರೆ.
ಶಾಸಕರಿಗೆ ಬಿಜೆಪಿಯ ರಾಂಪಾಲ್ ಸಿಂಗ್, ನರೋತ್ತಮ್ ಮಿಶ್ರಾ, ಅರವಿಂದ ಬದೌರಿಯಾ ಹಾಗೂ ಸಂಜಯ್ ಪಾಠಕ್ ಹಣ ನೀಡುತ್ತಿದ್ಧಾರೆ. ಅವರು ದಾಳಿ ನಡೆಸಿದ್ದರೆ ಸಿಕ್ಕಿಹಾಕಿಕೊಳ್ಳುತ್ತಿದ್ದರು. 10-11 ಶಾಸಕರು ಅಲ್ಲಿದ್ದ ವಿಚಾರವಾಗಿ ಸಂಶಯವಿದೆ. ಆದರೆ, ಪ್ರಸ್ತುತವಾಗಿ ಬಿಜೆಪಿ ಜೊತೆ ನಾಲ್ವರಷ್ಟೇ ಇದ್ದಾರೆ. ಅವರೂ ಕೂಡಾ ವಾಪಾಸ್ ಬರಲಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಪರಿಸ್ಥಿತಿ ಸದ್ಯಕ್ಕೆ ನಿಯಂತ್ರಣದಲ್ಲಿದೆ. ಪತ್ರಿಕಾಗೋಷ್ಠಿ ಮಾಡಿ ವಿಸ್ತೃತ ಮಾಹಿತಿ ತಿಳಿಸಲಿದ್ದೇವೆ ಎಂಬುದಾಗಿ ಜಿತು ಪಟ್ವಾರಿ ತಿಳಿಸಿದ್ದಾರೆ.
ಈ ನಡುವೆ, ಮಧ್ಯ ಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಅವರು ರಾಜಕೀಯ ಬೆಳವಣಿಗೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಮ್ಮ ಶಾಸಕರು ವಾಪಾಸ್ ಬರಲಿದ್ದಾರೆ. ಸರ್ಕಾರಕ್ಕೆ ಏನೂ ಆಗುವುದಿಲ್ಲ ಎಂದು ಹೇಳಿದ್ದಾರೆ.
230 ಸದಸ್ಯ ಬಲದ ಮಧ್ಯ ಪ್ರದೇಶ ವಿಧಾನಸಭೆಗೆ 2018ರ ಡಿಸೆಂಬರ್ನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ 114 ಸ್ಥಾನ ಪಡೆದಿತ್ತು. 109 ಸ್ಥಾನ ಬಿಜೆಪಿ ಗಳಿಸಿದ್ದರೆ. 4 ಸ್ಥಾನ ಪಕ್ಷೇತರರು, 2 ಬಿಎಸ್ಪಿ, 1 ಸ್ಥಾನ ಎಸ್ಪಿ ಪಡೆದಿತ್ತು. 116 ಸ್ಥಾನ ಬಹುಮತಕ್ಕೆ ಬೇಕಿದ್ದು, ಬಿಎಸ್ಪಿ, ಇತರರ ಬೆಂಬಲದೊಂದಿಗೆ ಕಾಂಗ್ರೆಸ್ ಸರ್ಕಾರ ರಚಿಸಿತ್ತು.