ನವದೆಹಲಿ, ಮಾ 4 (Daijiworld News/MSP): ಜಗತ್ತಿನಾದ್ಯಂತ ಮೂರು ಸಾವಿರಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿರುವ ಕೊರೊನಾ ಭಾರತದಲ್ಲೂ ಕಾಲಿಟ್ಟಿರುವ ಹಿನ್ನಲೆಯಲ್ಲಿ ಸೋಂಕು ಹರಡದಂತೆ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.
ಈ ನಡುವೆ ಸೋಂಕು ಹರಡಂತೆ ಜಾಗೃತಿ ಮೂಡಿಸುವ ನಿರಂತರ ಪ್ರಯತ್ನಕ್ಕೆ ಪ್ರಧಾನಿ ನರೇಂದ್ರ ಮೋದಿ ಕೈಹಾಕಿದ್ದಾರೆ. ಮಂಗಳವಾರವಷ್ಟೇ "ಭಯಪಡುವ ಅಗತ್ಯವಿಲ್ಲ. ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಭಾರತಕ್ಕೆ ಆಗಮಿಸುವ ಜನರನ್ನು ಪರೀಕ್ಷಿಸುವುದರಿಂದ ಹಿಡಿದು ತ್ವರಿತ ವೈದ್ಯಕೀಯ ಚಿಕಿತ್ಸೆ ನೀಡುವವರೆಗೆ ವಿವಿಧ ಸಚಿವಾಲಯಗಳು ಮತ್ತು ರಾಜ್ಯಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ" ಎಂದು ಪ್ರಧಾನಿ ಮೋದಿ ಟ್ವೀಟ್ ನಲ್ಲಿ ತಿಳಿಸಿದ್ದರು.
ಇದೀಗ ಮತ್ತೊಮ್ಮೆ ಟ್ವೀಟ್ ಮೂಲಕ ಜನತೆಗೆ ಕೊರೋನಾ ವಿರುದ್ದ ಹೋರಾಡುವ ಸಂದೇಶ ರವಾನಿಸಿದ್ದು, ಆದಷ್ಟು ಸಾಮೂಹಿಕವಾಗಿ ಜತೆ ಸೇರುವುದನ್ನು ಕಡೆಗಣಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮಾತ್ರವಲ್ಲದೇ ಇದೇ ಹಿನ್ನಲೆಯಲ್ಲಿ ನಾನು ಈ ವರ್ಷದ ಹೋಳಿ ಹಬ್ಬದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.