ನವದೆಹಲಿ, ಮಾ 4 (Daijiworld News/MSP): ದೇಶದಲ್ಲಿ ಸೋಂಕು ಪೀಡಿತರ ಸಂಖ್ಯೆ 28 ಕ್ಕೆ ಏರಿಕೆಯಾಗಿದೆ. ಇದೀಗ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರೇ ನೀಡಿರುವ ಮಾಹಿತಿ ಪ್ರಕಾರ ಭಾರತದಲ್ಲಿ ಇಲ್ಲಿಯವರೆಗೆ ಒಟ್ಟು 28 ಮಂದಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎನ್ನುವುದು ದೃಢವಾಗಿದೆ. ಇವರಲ್ಲಿ 14 ಇಟಲಿ ಪ್ರವಾಸಿಗರೂ ಒಳಗೊಂಡಿದ್ಧಾರೆ.
ಆರೋಗ್ಯ ಸಚಿವ ಹರ್ಷ್ ವರ್ಧನ್ ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತಕ್ಕೆ ಬರುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರನ್ನೂ ಇದೀಗ ತಪಾಸಣೆಗೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈವರೆಗೆ ಕೊರೋನಾ ಸೋಂಕು ಇದ್ದ 12 ದೇಶಗಳ ಜನರನಷ್ಟೇ ತಪಾಸಣೆಗೆ ಒಳಪಡಿಸಲಾಗುತ್ತಿತ್ತು. ಆದರೆ ಇದೀಗ ಪ್ರತಿಯೊಂದು ದೇಶದಿಂದ ಬರುವ ಪ್ರತಿಯೊಬ್ಬರನ್ನೂ ಕೊರೋನಾ ವೈರಸ್ ಪತ್ತೆ ಪರೀಕ್ಷೆಗೆ ಒಳಪಡಿಸಲಾಗುತ್ತದೆಯಂತೆ.
ಇದಲ್ಲದೆ ಕೊರೋನಾ ವೈರಸ್ ಪತ್ತೆಗೆ ಇರುವ ಲ್ಯಾಬೋರೇಟರಿಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಚಿಂತಿಸಲಾಗಿದೆ. ಸಧ್ಯ 34 ಪ್ರಯೋಗಾಲಯಗಳಿವೆ. ಅಗತ್ಯಬಿದ್ದರೆ ಈ ಸಂಖ್ಯೆಯನ್ನು 50ಕ್ಕೆ ಏರಿಸುತ್ತೇವೆ ಎಂದುಹರ್ಷ್ ವರ್ಧನ್ ಮಾಹಿತಿ ನೀಡಿದ್ಧಾರೆ.
ಎನ್ 95 ಮುಖವಾಡಗಳ ಬೆಲೆ ಏರಿಕೆಯ ವರದಿಯ ಕುರಿತು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರು ಪ್ರತಿಕ್ರಿಯಿಸಿದ್ದು, ಇಂಥ ಸಂದರ್ಭದಲ್ಲಿ ಜನರು ಲಾಭಕ್ಕಾಗಿ ಇದರ ದುರುಪಯೋಗಪಡಿಸಿಕೊಳ್ಳುತ್ತಿದ್ದರೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.