ನವದೆಹಲಿ, ಮಾ 4 (Daijiworld News/MSP): ದೇಶವನ್ನೇ ಬೆಚ್ಚಿಬೀಳಿಸಿದ್ದ ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಈಗಾಗಲೇ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ಗೆ ಸಂತ್ರಸ್ಥೆಯ ತಂದೆ ಸಾವಿನ ಪ್ರಕರಣದಲ್ಲೂ ಅಪರಾಧಿ ಎನ್ನುವುದು ಸಾಬೀತಾಗಿದೆ.
ದೆಹಲಿಯ ತೀಸ್ ಹಜಾರಿ ಕೋರ್ಟ್ ಸಂತ್ರಸ್ಥೆಯ ತಂದೆ ಸಾವಿನ ಪ್ರಕರಣದಲ್ಲೂ ಕುಲದೀಪ್ ಸೆಂಗಾರ್ ಅಪರಾಧಿ ಎಂದು ತೀರ್ಪು ನೀಡಿದೆ. 2018ರ ಏಪ್ರಿಲ್ 9ರಂದು ಪೊಲೀಸ್ ಕಸ್ಟಡಿಯಲ್ಲಿ ಸಂತ್ರಸ್ತೆಯ ತಂದೆ ಶಂಕಾಸ್ಪದವಾಗಿ ಸಾವನ್ನಪ್ಪಿದ್ದರು.
ಪೊಲೀಸ್ ಕಸ್ಟಡಿಗೆ ಒಳಗಾಗುವ ಮುಂಚೆ ಸಂತ್ರಸ್ತೆಯ ತಂದೆ ಮೇಲೆ ತಂಡವೊಂದು ಹಲ್ಲೆ ನಡೆಸಿತ್ತು. ಈ ವೇಳೆ ಸ್ಥಳಕ್ಕಾಗಿಮಿಸಿದ್ದ ಪೊಲೀಸರು ಹಲ್ಲೆಗೊಳಗಾಗಿದ್ದ ಸಂತ್ರಸ್ಥೆ ತಂದೆಯನ್ನು ಆಸ್ಪತ್ರೆಗೆ ಸಾಗಿಸುವ ಬದಲು ಠಾಣೆಗೆ ಕರೆದೊಯಿದ್ದರು. ಇದಾಗಿ 2 ದಿನಗಳ ಬಳಿಕ ಅಂದರೆ ಏಪ್ರಿಲ್ 9ರಂದು ಅವರು ಠಾಣೆಯಲ್ಲೇ ನಿಗೂಢವಾಗಿ ಮೃತಪಟ್ಟಿದ್ದರು. ಈ ವೇಳೆ ದುಷ್ಕರ್ಮಿಗಳ ತಂಡ ಸಂತ್ರಸ್ತೆಯ ತಂದೆ ಮೇಲೆ ದಾಳಿ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಇದಾದ ಬಳಿಕ ಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳ ತಂಡದಲ್ಲಿದ್ದ ಕುಲದೀಪ್ ಸೆಂಗಾರ್, ಆತನ ಸಹೋದರ ಅಟುಲ್ ಸೆಂಗಾರ್, ಪೊಲೀಸ್ ಠಾಣಾ ಇನ್ ಚಾರ್ಜ್ ಆಗಿದ್ದ ಅಶೋಕ್ ಸಿಂಗ್ ಭಡೌರಿಯಾ, ಸಬ್ ಇನ್ಸ್ ಪೆಕ್ಟರ್ ಕಮ್ಟಾ ಪ್ರಸಾದ್, ಪೇದೆ ಅಮೀರ್ ಖಾನ್ ಸೇರಿದಂತೆ ಇತರೆ 6 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿತ್ತು.ಇದೀಗ ಈ ಪ್ರಕರಣದ ವಿಚಾರಣೆ ಪೂರ್ಣಗೊಂಡು ದೆಹಲಿಯ ತೀಸ್ ಹಜಾರಿ ಕೋರ್ಟ್ ತೀರ್ಪು ನೀಡಿದ್ದು, ಕುಲದೀಪ್ ಸೆಂಗಾರ್ ಅಪರಾಧಿ ಎಂದು ಹೇಳಿದೆ. ಅಲ್ಲದೆ ಈ ಪ್ರಕರಣದ ಇತರೆ ನಾಲ್ಕು ಆರೋಪಿಗಳನ್ನು ಪ್ರಕರಣದಿಂದ ವಜಾ ಮಾಡಿದೆ.