ಬೆಂಗಳೂರು, ಮಾ. 04 (Daijiworld News/MB) : ಭಾರತದ ಸಂವಿಧಾನವನ್ನು ರಚಿಸಿದ್ದು ಬಿ.ಆರ್ ಅಂಬೇಡ್ಕರ್ ಹೌದಾ , ಅಲ್ವಾ ಎಂಬ ವಿಚಾರವು ಬುಧವಾರ ಸದನದಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ಚರ್ಚೆ ನಡೆಯಿತು.
ಮಂಗಳವಾರ ಸದನದಲ್ಲಿ ಸಂವಿಧಾನದ ಕುರಿತಾದ ಚರ್ಚೆಯ ಪ್ರಾಸ್ತಾವಿಕ ಭಾಷಣವನ್ನು ಮಾಡಿದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂವಿಧಾನ ರಚನಾ ಸಭೆಗೆ ಆಯ್ಕೆಯಾಗಿದ್ದ ಮಂಗಳೂರು ಮೂಲದ ಬಿ.ಎನ್ ರಾವ್ ಅವರ ಕೊಡುಗೆ ಅಪಾರವಾದುದು. ಬಿ.ಎನ್ ರಾವ್ ರಚಿಸಿದ ಸಂವಿಧಾನದ ಮೂಲ ಕರಡು ಪ್ರತಿಯನ್ನು ಡಾ. ಬಿ.ಆರ್ ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲಾದ ಸಂವಿಧಾನದ ಕರಡು ಸಮಿತಿಗೆ ಸಲ್ಲಿಸಲಾಗಿತ್ತು. ಇದನ್ನು ರಚನಾ ಸಮಿತಿಯಲ್ಲಿ ಚರ್ಚಿಸಿ ಅಂಬೇಡ್ಕರ್ ನೇತೃತ್ವದಲ್ಲಿ ಹಲವಾರು ಮಾರ್ಪಾಡುಗಳನ್ನು ಮಾಡಲಾಯಿತು ಎಂದು ಹೇಳಿದ್ದರು.
ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಕೆ ಪಾಟೀಲ್ ಸದನದಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿ, "ಸಂವಿಧಾನದ ಕರಡನ್ನು ಬಿ.ಎನ್ ರಾವ್ ರಚನೆ ಮಾಡಿದ್ದಾರೆ ಎಂಬುದು ತಪ್ಪು ಮಾಹಿತಿ, ಇತಿಹಾಸವನ್ನು ತಿರುಚುವ ಕೆಲಸ ಮಾಡಬಾರದು ಎಂದು ಹೇಳಿ ಒಂದು ವೇಳೆ ಆಕಸ್ಮಿಕವಾಗಿ ತಪ್ಪಾದಲ್ಲಿ ಅದನ್ನು ತಿದ್ದುಪಡಿ ಮಾಡಬೇಕು" ಎಂದು ಸ್ಪೀಕರ್ಗೆ ಒತ್ತಾಯ ಮಾಡಿದರು.
ಇದಕ್ಕೆ ಉತ್ತರಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, "ಪ್ರಸ್ತಾವಿಕವಾಗಿ ಭಾಷಣದಲ್ಲಿ ತಪ್ಪಾಗಿದ್ದಲ್ಲಿ ಅದನ್ನು ತಿದ್ದುಪಡಿ ಮಾಡಿಕೊಳ್ಳಲು ಸಿದ್ಧ" ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂವಿಧಾನದ ರಚನೆಯ ಸಂದರ್ಭದ ಮಾಹಿತಿ ನೀಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, "ಕರಡು ಸಮಿತಿಯಲ್ಲಿ ಏಳು ಜನ ಸದಸ್ಯರಿದ್ದರು. ಆದರೆ ಈ ಪೈಕಿ ಒಬ್ಬರು ನಿಧನರಾಗಿದ್ದು ಉಳಿದವರು ಬೇರೆ ಬೇರೆ ಕಾರಣದಿಂದಾಗಿ ಸಕ್ರಿಯವಾಗಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಸಂವಿಧಾನದವನ್ನು ಸಂಪೂರ್ಣವಾಗಿ ರಚನೆ ಮಾಡುವಲ್ಲಿ ಡಾ. ಬಿಆರ್ ಅಂಬೇಡ್ಕರ್ ಪಾತ್ರ ಬಹುಮುಖ್ಯವಾದುದು ಎಂದು ತಿಳಿಸಿದರು.
ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ಬಿಎಸ್ವೈ, "ಸಂವಿಧಾನದ ರಚನೆಯಲ್ಲಿ ಅಂಬೇಡ್ಕರ್ ಅವರ ಶ್ರಮ ಅಪಾರ, ಸಮಿತಿಯ ಏಳು ಜನರಲ್ಲಿ ಎಲ್ಲರೂ ಗೈರಾದ ಸಂದರ್ಭದಲ್ಲೂ ಸಂವಿಧಾನವನ್ನು ರಚನೆ ಮಾಡಿದವರು ಅವರು. ಹಾಗಾಗಿ ಸಂವಿಧಾನ ರಚನೆಯ ಎಲ್ಲಾ ಗೌರವ ಅಂಬೇಡ್ಕರ್ ಅವರಿಗೆ ಸಲ್ಲಬೇಕು ಎಂದು ಹೇಳಿದರು.
ಹಾಗೆಯೇ ಸಂವಿಧಾನ ರಚನೆಯ ಗೊಂದಲ ಸೃಷ್ಟಿಗೆ ಕಾರಣವನ್ನು ಹೇಳಿದ ಪ್ರಿಯಾಂಕ್ ಖರ್ಗೆ, "2011 ರಲ್ಲಿ ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಆಫ್ ಆರ್ಟ್ ಮುಖ್ಯಸ್ಥ ರಾಮ್ ಬಹುದೂರ್ ರಾಯ್ ಎಂಬುವವರು ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದ್ದಾರೆ ಎಂಬುವುದು ತಪ್ಪು ಕಲ್ಪನೆ ಎಂದು ಹೇಳಿದ್ದಾರೆ" ಎಂಬ ವಿಚಾರವನ್ನು ಪ್ರಸ್ತಾಪ ಮಾಡಿದರು.
ಬಿ.ಎನ್ ರಾವ್ ಸಂವಿಧಾನದ ಕರಡನ್ನು ರಚನೆ ಮಾಡಿದರು, ಅಂಬೇಡ್ಕರ್ ಅದನ್ನು ತಿದ್ದುಪಡಿ ಮಾಡಿದರು, ಹಾಗಾಗಿ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಪಾತ್ರ ಸೀಮಿತ ಎಂದು ಹೇಳಿದ್ದರು. ಅಷ್ಟು ಮಾತ್ರವಲ್ಲದೇ ಅಂಬೇಡ್ಕರ್ ಅವರು ಸಂವಿಧಾನವನ್ನು ಬರೆದೇ ಇಲ್ಲ ಎಂದು ಹೇಳಿದ್ದರು. ಈ ಮೂಲಕ ಇತಿಹಾಸವನ್ನು ತಿರುಚಲಾಗುತ್ತಿದೆ" ಎಂದು ಆರೋಪ ಮಾಡಿದರು.
ಇದಕ್ಕೆ ಜೊತೆಗೂಡಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಹರ್ಷದ್, ಗುಜರಾತ್ ವಿಧಾನಸಭೆ ಸ್ಪೀಕರ್ ತ್ರಿವೇದಿಯವರು ಕೂಡಾ ಅಂಬೇಡ್ಕರ್ ಸಂವಿಧಾನ ರಚನೆ ಮಾಡಿಲ್ಲ ಎಂದು ಹೇಳಿದ್ದರು ಎಂಬುದನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸ್ಪೀಕರ್ ಈ ವಿಚಾರವನ್ನು ಮುಂದುವರಿಸುವುದು ಬೇಡ ಎಂದು ಚರ್ಚೆಗೆ ತೆರೆ ಎಳೆದರು.