ಬೆಂಗಳೂರು, ಮಾ.04 (DaijiworldNews/PY) : "ಬಿಜೆಪಿ ನಾಯಕರಿಂದ ಸಂವಿಧಾನಕ್ಕೆ ಅಪಚಾರವಾಗಿದೆ ಹಾಗೂ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರನ್ನು ಅವಮಾನಿಸುವುದರ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ" ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸ್ವಾತಂತ್ರ್ಯ ಹೋರಾಟ ಹಾಗೂ ಹೋರಾಟಗಾರರ ಬಗ್ಗೆ ಬಿಜೆಪಿ ನಾಯಕರಿಗೆ ಎಳ್ಳಷ್ಟೂ ಗೌರವವಿಲ್ಲ. ಬಿಜೆಪಿ ನಾಯಕರಿಗೆ ಮರ್ಯಾದೆಯಿಲ್ಲ. ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸುವ ಪಕ್ಷ ಎನ್ನುತ್ತಾರೆ. ಆದರೆ ದೊರೆಸ್ವಾಮಿಯಂತಹ ಪ್ರಾಮಾಣಿಕ ಹೋರಾಟಗಾರರನ್ನು ಅವಮಾನಿಸುತ್ತಾರೆ. ಇವರಿಗೆ ಸ್ವಾತಂತ್ರ್ಯದ ಬೆಲೆ ಗೊತ್ತಿಲ್ಲ. ಇವರು ಅವಮಾನಿಸಿರುವುದು ಬರಿ ದೊರೆಸ್ವಾಮಿ ಒಬ್ಬರನ್ನೇ ಅಲ್ಲ, ಬದಲಾಗಿ ಇಡೀ ಸ್ವಾತಂತ್ರ್ಯ ಹೋರಾಟದ ಚಳುವಳಿಯನ್ನು ಅವಮಾನಿಸಿದ್ದಾರೆ" ಎಂದರು.
"ಇಡೀ ಬಿಜೆಪಿ ಸಚಿವರು ಯತ್ನಾಳ್ ಅವರ ಬೇಜವಾಬ್ದಾರಿ ಹೇಳಿಕೆಯನ್ನುಸಮರ್ಥಿಸಿಕೊಳ್ಳುತ್ತಾರೆ ಎಂದರೆ ಇದರ ಹಿಂದೆ ದೊಡ್ಡ ಷಡ್ಯಂತ್ರ ಇರುವುದು ಸ್ಪಷ್ಟವಾಗಿದೆ. ಇವರಿಗೆ ಮಾನ ಮರ್ಯಾದೆ ಇಲ್ಲ, ಏನು ಹೇಳಿದರೂ ತಲೆಗೆ ಹೋಗುವುದೇ ಇಲ್ಲ. ಬಿಜೆಪಿಯವರಿಂದ ಇಡೀ ಸಂವಿಧಾನಕ್ಕೆ ಅಪಚಾರವಾಗಿದೆ" ಎಂದು ಹೇಳಿದರು.
ಈ ವೇಳೆ ಯತ್ನಾಳ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿರುವ ಅವರು, "ನಾವು ಶಾಸಕ ಯತ್ನಾಳ್ ವಿರುದ್ಧ ಸದನದಲ್ಲಿ ಚರ್ಚೆಗೆ ಅವಕಾಶ ಕೇಳಿ ನೊಟೀಸ್ ಕೊಟ್ಟರೆ ಸ್ಪೀಕರ್ ಅದನ್ನು ನಿರಾಕರಿಸುತ್ತಾರೆ. ಇದು ಸಂವಿಧಾನ ಬಾಹೀರ. ಹೀಗಾಗಿ ರಾಜ್ಯಪಾಲರಿಗೆ ಮನವಿ ನೀಡಲಾಗಿದೆ. ರಾಜ್ಯಪಾಲರಿಗೆ ಸಂವಿಧಾನದ 175ನೇ ವಿಧಿಯ ಅನ್ವಯ ಸ್ಪೀಕರ್ಗೆ ಸೂಚನೆ ನೀಡುವ ಅಧಿಕಾರ ಇದೆ. ಹೀಗಾಗಿ ಸದನದಿಂದ ಯತ್ನಾಳ್ ಅವರನ್ನು ಉಚ್ಛಾಟಿಸುವ ಹಾಗೂ ಚರ್ಚೆಗೆ ಅವಕಾಶ ಮಾಡಿಕೊಡುವ ಬಗ್ಗೆ ಸ್ಪೀಕರ್ಗೆ ಸೂಚಿಸುವಂತೆ ಮನವಿ ಮಾಡಿದ್ದೇವೆ" ಎಂದರು.