ಮೈಸೂರು, ಮಾ.04 (DaijiworldNews/PY) : "ಯಡಿಯೂರಪ್ಪನವರೇ ಮತ್ತಷ್ಟು ಸಾಲ ಜಾಸ್ತಿ ಮಾಡಬೇಡಿ. ಬೇಕಾಬಿಟ್ಟಿ ಯೋಜನೆಗಳ ಘೋಷಣೆ ಬೇಡ. ಉಳಿತಾಯದ ಬಜೆಟ್ ಮಾಡಿ. ಎಲ್ಲಾ ಸಿಎಂಗಳು 10 ವರ್ಷದ ಬಜೆಟ್ ಮಾಡಿದ್ದಾರೆ. ನೀವು ಕೇವಲ ಒಂದು ವರ್ಷದ ಬಜೆಟ್ ಮಂಡನೆ ಮಾಡಿ ಸಾಕು" ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನಲ್ಲಿ ರಾಜ್ಯ ಬಜೆಟ್ ಮಂಡನೆ ವಿಚಾರವಾಗಿ ಮಾತನಾಡಿದ ಅವರು, "ಜನರ ಅನುಕೂಲಕ್ಕಾಗಿ ಬಜೆಟ್ ಮಾಡಬೇಕು. ಬಜೆಟ್ ಸರ್ಕಾರದ ಜನಪ್ರಿಯತೆ ಹೆಚ್ಚಿಸುವುದಿಲ್ಲ. ಬಜೆಟ್ ಮಂಡನೆ ಕೇವಲ ಶಾಸ್ತ್ರವಾಗಬಾರದು" ಎಂದು ತಿಳಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ದವೂ ವಾಗ್ದಾಳಿ ನಡೆಸಿದ ವಿಶ್ವನಾಥ್ ಅವರು, "ಮಾತೆತ್ತಿದರೆ 14 ಬಾರಿ ಬಜೆಟ್ ಮಂಡನೆ ಎನ್ನುತ್ತಾರೆ. ಬಜೆಟ್ನಲ್ಲಿ ಆರ್ಥಿಕ ಶಿಸ್ತು ಶಿಷ್ಟಾಚಾರ ತರಲು ಅವರಿಂದ ಸಾಧ್ಯವಾಗಿಲ್ಲ. ರಾಜ್ಯಕ್ಕೆ ಮೂರು ಲಕ್ಷ ಕೋಟಿ ಸಾಲದ ಹೊರೆ ಇದೆ. ಅದರಲ್ಲಿ ಒಂದೂವರೆ ಲಕ್ಷ ಕೋಟಿ ಸಿದ್ದರಾಮಯ್ಯ ಅವರದ್ದೇ ಇದೆ. ಮಾಜಿ ಮುಖ್ಯಮಂತ್ರಿ ಪರಮಾಧಿಕಾರದ ಹೆಸರಿನಲ್ಲಿ ಜನರನ್ನು ಸಾಲದ ಶೂಲಕ್ಕೆ ಸಿಲುಕಿಸಿದ್ದೀರಿ. ಯಡಿಯೂರಪ್ಪ ಅವರಿಗೆ ಬಜೆಟ್ ಬಗ್ಗೆ ಸಲಹೆ ನೀಡಿ" ಎಂದು ತಿಳಿಸಿದರು.
"ಸಿಎಂ ಅವರೇ ಮತ್ತಷ್ಟು ಸಾಲ ಜಾಸ್ತಿ ಮಾಡಬೇಡಿ. ಬೇಕಾಬಿಟ್ಟಿಯಾದ ಯೋಜನೆಗಳ ಘೋಷಣೆ ಬೇಡ. ಉಳಿತಾಯದ ಬಜೆಟ್ ಮಾಡಿ. ಎಲ್ಲಾ ಸಿಎಂಗಳು 10 ವರ್ಷದ ಬಜೆಟ್ ಮಾಡಿದ್ದಾರೆ. ನೀವು ಕೇವಲ ಒಂದು ವರ್ಷದ ಬಜೆಟ್ ಮಾಡಿ" ಎಂದರು.
ಶಾಸಕ ಯತ್ನಾಳ್ ಅವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರಾದ ಹೆಚ್.ಎಸ್.ದೊರೆಸ್ವಾಮಿ ಕುರಿತು ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಈ ವಿಚಾರದಲ್ಲಿ ಇಬ್ಬರದೂ ತಪ್ಪು ಇದೆ. ಒಂದು ಪಕ್ಷದ ಪರವಾಗಿ ದೊರೆಸ್ವಾಮಿ ಅವರು ಮಾತನಾಡಬಾರದು. ಎಲ್ಲರಿಗೂ ಅವರ ಮೇಲೆ ಅಪಾರವಾದ ಗೌರರವಿದೆ. ಎಲ್ಲದಕ್ಕೂ ಅವರು ಬಾಯಿ ಹಾಕಬಾರದು. ಅವರು ಪಕ್ಷದ ವಕ್ತಾರರಂತೆ ಮಾತನಾಡಬಾರದು. ನಿಮ್ಮ ಗೌರವ ಉಳಿಸಿಕೊಳ್ಳಿ. ರಾಜಕೀಯದ ಕೊಳಚೆಯತ್ತ ಹೋಗಿ ಬೀಳಬೇಡಿ. ನೀವು ರಾಜಕೀಯ ಪಕ್ಷಗಳಿಗೆ ದಾಳವಾಗಬೇಡಿ" ಎಂದು ಹೇಳಿದರು.