ಕೋಲ್ಕತ್ತಾ, ಮಾ.04 (DaijiworldNews/PY) : "ಜನರು ಕೊರೋನಾ, ಕೊರೋನಾ ಎಂದು ಕಿರುಚುತ್ತಿದ್ದಾರೆ. ದೆಹಲಿ ಹಿಂಸಾಚಾರದಲ್ಲಿ ಜನರು ಕೊಲ್ಲಲ್ಪಟ್ಟಿದ್ದು, ಕೊರೊನಾ ವೈರಸ್ ಕಾರಣದಿಂದಲ್ಲ ಬಿಜೆಪಿಯಿಂದ ಕೊಲೆಯಾಗಿದ್ದಾರೆ" ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಬುಧವಾರ ಕೋಲ್ಕತ್ತಾದಲ್ಲಿ ಮಾತನಾಡಿದ ಅವರು, "ಕೊರೋನಾ ವೈರಸ್ನಿಂದ ದೇಶದಲ್ಲಿ ಭಾರೀ ತಲ್ಲಣ ಉಂಟಾಗಿದೆ. ಕೊರೋನಾ ವೈರಸ್ ಭೀತಿಯು ಇತ್ತೀಚಿನ ದೆಹಲಿ ಹಿಂಸಾಚಾರದಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರವಾಗಿದೆ" ಎಂದರು.
"ದೆಹಲಿ ಹಿಂಸಾಚಾರವನ್ನು ಕೆಲವು ಚಾನೆಲ್ಗಳು ಕೊರೋನಾ ವೈರಸ್ ಭೀತಿಯಿಂದ ಮುಚ್ಚಿಡಲು ಪ್ರಯತ್ನಿಸುತ್ತಿವೆ. ಇದೊಂದು ರೋಗವಷ್ಟೇ ಜನರು ಗಾಬರಿಯಾಗಬಾರದು. ದೆಹಲಿ ಹಿಂಸಾಚಾರದಲ್ಲಿ ಜನರು ಕೊಲ್ಲಲ್ಪಟ್ಟಿದ್ದು ಕೊರೊನಾ ವೈರಸ್ ಕಾರಣದಿಂದಲ್ಲ, ಬಿಜೆಪಿಯಿಂದ ಕೊಲೆಯಾಗಿದ್ದಾರೆ" ಎಂದು ಹೇಳಿದರು.
ಮಾ.3 ಮಂಗಳವಾರದಂದು ಬಿಜೆಪಿಯ ವಿರುದ್ದ ತೀವ್ರವಾದ ಆಕ್ರೋಶ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ ಅವರು, "ದೆಹಲಿ ಹಿಂಸಾಚಾರವು ರಾಜ್ಯ ಪ್ರಾಯೋಜಿತ ಯೋಜಿತ ನರಮೇಧ ಎಂದಿದ್ದರು. ಕೋಲ್ಕತ್ತಾದಲ್ಲಿ ನಡೆದ ಟಿಎಂಸಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯು ದೇಶಾದ್ಯಂತ ಗುಜರಾತ್ ಮಾದರಿಯ ಗಲಭೆಯನ್ನು ಪುನರಾವರ್ತಿಸಲು ಪ್ರಯತ್ನಿಸುತ್ತಿದೆ" ಎಂದು ಹೇಳಿದ್ದರು.
"ನನಗೆ ದೆಹಲಿಯಲ್ಲಿ ಮುಗ್ಧ ಜನರನ್ನು ಹತ್ಯೆಗೈದಿದ್ದು ತುಂಬಾ ನೋವು ತಂದಿದೆ. ಇದು ನಾನು ಯೋಜಿತ ನರಮೇಧ ಎಂದು ಅಂದುಕೊಳ್ಳುತ್ತೇನೆ. ಕೇಂದ್ರದ ಅಡಿಯಲ್ಲಿ ದೆಹಲಿ ಪೊಲೀಸರಿದ್ದಾರೆ. ಗಲಭೆಯನ್ನು ದೆಹಲಿ ಪೊಲೀಸರು, ಸಿಆರ್ಪಿಎಫ್, ಸಿಐಎಸ್ಎಫ್ ಯಾರೂ ನಿಯಂತ್ರಿಸಲಿಲ್ಲ" ಎಂದಿದ್ದರು.
ದೇಶದಲ್ಲಿ ಸೋಂಕು ಪೀಡಿತರ ಸಂಖ್ಯೆ 28 ಕ್ಕೆ ಏರಿಕೆಯಾಗಿದೆ. ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರು ನೀಡಿರುವ ಮಾಹಿತಿ ಪ್ರಕಾರ ಭಾರತದಲ್ಲಿ ಇಲ್ಲಿಯವರೆಗೆ ಒಟ್ಟು 28 ಮಂದಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎನ್ನುವುದು ದೃಢವಾಗಿದೆ. ಇವರಲ್ಲಿ 14 ಇಟಲಿ ಪ್ರವಾಸಿಗರೂ ಒಳಗೊಂಡಿದ್ಧಾರೆ.