ಕೋಲ್ಕತ್ತಾ, ಮಾ.04 (DaijiworldNews/PY) : ಜಗತ್ತಿನಾದ್ಯಾಂತ ಜನರನ್ನು ಆತಂಕಕ್ಕೊಳಗಾಗಿಸಿದ ಮಾರಣಾಂತಿಕ ಕೊರೋನಾ ವೈರಸ್ ಇದೀಗ ಭಾರತಕ್ಕೂ ಲಗ್ಗೆ ಇಟ್ಟಿದ್ದು, ದೇಶಾದ್ಯಂತ ಭೀತಿ ಹುಟ್ಟಿಸಿದೆ.
ಮಹಾಮಾರಿ ಕೊರೋನಾ ವೈರಸ್ ಈಗಾಗಲೇ ದೇಶದಲ್ಲಿ 28 ಮಂದಿಯಲ್ಲಿ ತಗಲಿರುವುದನ್ನು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಲಸಿಕೆ ಇಲ್ಲದ ಕೊರೋನಾ ವೈರಸ್ ಯಾರಿಗೆ, ಯಾವಾಗ ಹರಡುತ್ತದೆ ಎಂಬ ಆತಂಕದಲ್ಲಿ ಜನರು ಮನೆಯಿಂದ ಹೊರಗೆ ಹೋಗಲು ಯೋಚಿಸುವಂತಾಗಿದೆ.
ಈ ನಡುವೆ, ಪಶ್ಚಿಮ ಬಂಗಾಳದ ಬಿಜೆಪಿ ಕಾರ್ಯಕರ್ತರು ಜನರಿಗೆ ಮಾಸ್ಕ್ ನೀಡುತ್ತಿದ್ದಾರೆ. ಆದರೆ, ಈ ಮಾಸ್ಕ್ಗಳಲ್ಲಿಯೂ ಪಕ್ಷದ ಪ್ರಚಾರಕ್ಕೆ ಹೊರಟಿರುವುದಕ್ಕೆ ಸಾರ್ವಜನಿಕರು ಟೀಕಿಸಿದ್ದಾರೆ.
ಕೊರೋನಾ ವೈರಸ್ನಿಂದ ಕಾಪಾಡಿ ಮೋದಿ ಜೀ, ಪಶ್ಚಿಮ ಬಂಗಾಳ ಬಿಜೆಪಿ ಎಂದು ಕೋಲ್ಕತ್ತ ಜನರಿಗೆ ನೀಡಿರುವ ಮಾಸ್ಕ್ಗಳಲ್ಲಿ ಬರೆಯಲಾಗಿದ್ದು, ಇದರೊಂದಿಗೆ ಬಿಜೆಪಿ ಚಿಹ್ನೆಯಾದ ಕಮಲ ಚಿತ್ರವನ್ನು ಬಿಡಿಸಲಾಗಿದೆ.
ಪಶ್ಚಿಮಬಂಗಾಳ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಬಿಜೆಪಿಯು, ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಅನ್ನು ಅಧಿಕಾರದಿಂದ ಕೆಳಗಿಳಿಸಲು ಸಕಲ ಸಿದ್ದತೆ ನಡೆಸುತ್ತಿದೆ. ಹಾಗಾಗಿ, ಇದೀಗ ಕೊರೋನಾ ವೈರಸ್ನಿಂದ ಕಾಪಾಡಿಕೊಳ್ಳಲು ನೀಡಿರುವ ಮಾಸ್ಕ್ಗಳಲ್ಲಿ ಮೋದಿ ಹಾಗೂ ಪಕ್ಷದ ಚಿಹ್ನೆಯನ್ನು ಬರೆಯುವ ಮುಖಾಂತರ ಪ್ರಚಾರಕ್ಕಾಗಿ ಹೊಸ ತಂತ್ರವನ್ನು ಮಾಡಿದ್ದಾರೆ.