ಬೆಂಗಳೂರು, ಮಾ 03(DaijiworldNews/SM): ರಾಜ್ಯ ಸರಕಾರದ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಸಿಎಂ ಬಿಎಸ್ ಯಡಿಯೂರಪ್ಪ ಬಜೆಟ್ ಮಂಡನೆಗೆ ರೆಡಿಯಾಗಿದ್ದಾರೆ. ಆದರೆ, ಆರ್ಥಿಕ ಸಂಕಷ್ಟದ ಹೊರೆ ರಾಜ್ಯ ಸರಕಾರಕ್ಕೆ ತಲೆನೋವನ್ನುಂಟು ಮಾಡುತ್ತಿದೆ.
ಈ ಬಾರಿಯ ಬಜೆಟ್ ಮೇಲೆ ರಾಜ್ಯದ ಜನತೆಗೆ ಸಾಕಷ್ಟು ನಿರೀಕ್ಷೆಗಳಿವೆ. ಇದೇ ಕಾರಣದಿಂದಾಗಿ ರಾಜ್ಯದ ಜನತೆಯ ಚಿತ್ತ ಮಾರ್ಚ್ ೫ರಂದು ಮಂಡನೆಯಾಗುವ ಬಜೆಟ್ ನತ್ತ ನೆಟ್ಟಿದೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ಈ ಹಿಂದೆ ಆಡಳಿತದಲ್ಲಿದ್ದ ಕಾಂಗ್ರೆಸ್ ಹಾಗೂ ಮೈತ್ರಿ ಸರಕಾರ ಘೋಷಿಸಿದ ಕೆಲವೊಂದು ಯೋಜನೆಗಳನ್ನು ಕೈಬಿಡುವ ಸಾಧ್ಯತೆಗಳು ಹೆಚ್ಚಾಗಿವೆ. ಇನ್ನೊಂದೆಡೆ, ಕೆಲವೊಂದು ಯೋಜನೆಗಳ ಹೆಸರು ಬದಲಾಯಿಸುವ ನಿರ್ಧಾರಗಳನ್ನು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.
೨೦೧೯-೨೦ನೇ ಸಾಲಿನಲ್ಲಿ ಮೈತ್ರಿ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ್ದ ಬಜೆಟ್ ಗಿಂತಲೂ ಈ ಸಲದ ಬಜೆಟ್ ಗಾತ್ರ ಹೆಚ್ಚಳವಾಗುವ ಸಾಧ್ಯತೆ ಹೆಚ್ಚಾಗಿವೆ.