ನವದೆಹಲಿ, ಮಾ 04 (DaijiworldNews/SM): ಇಡೀ ದೇಶದೆಲ್ಲೆಡೆ ತಲ್ಲಣ ಮೂಡಿಸಿದ್ದ ಹಾಗೂ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳ ಆಯಸ್ಸು ಮುಗಿದಂತೆ ಕಾಣುತ್ತಿಲ್ಲ. ಗಲ್ಲು ಫೈನಲ್ ಆಗುತ್ತಿದ್ದಂತೆ ಒಂದಲ್ಲ ಒಂದು ಕಾರಣಕ್ಕೆ ಮರಣ ದಂಡನೆ ಮುಂದೂಡಲಾಗುತ್ತಿದೆ. ಆದರೆ, ಇದೀಗ ಮತ್ತೆ ಹೊಸದೊಂದು ಡೆತ್ ವಾರಂಟ್ ಕೋರಿ ಅರ್ಜಿ ಸಲ್ಲಿಕೆಯಾಗಿದೆ.
ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಆಗ್ರಹಿಸಿ ಹೊಸ ಡೆತ್ ವಾರಂಟ್ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿದೆ.ಗುರುವಾರ ಮಧ್ಯಾಹ್ನ 2 ಗಂಟೆಗೆ ಈ ಸಂಬಂಧ ವಿಚಾರಣೆ ನಡೆಯಲಿದೆ. ಹೆಚ್ಚುವರಿ ಸೆಷನ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅರ್ಜಿ ಕುರಿತು ಪ್ರತಿಕ್ರಿಯೆ ಕೋರಿ ಅಪರಾಧಿಗಳಿಗೆ ನೋಟಿಸ್ ನೀಡಿದ್ದಾರೆ.
ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ವಕೀಲ ಇರ್ಫಾನ್ ಅಹ್ಮದ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಆರೋಪಿಗಳಿಗೆ ಮರಣ ದಂಡನೆ ವಿಧಿಸಲು ಹೊಸ ದಿನಾಂಕ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ಅಪರಾಧಿಗಳಿಗೆ ಇರುವ ಎಲ್ಲಾ ಕಾನೂನು ಮಾರ್ಗಗಳನ್ನು ಅವರು ಬಳಸಿಕೊಂಡಿದ್ದಾರೆ. ಇನ್ನು ಅವರಿಗೆ ಬಳಸಿಕೊಳ್ಳಲು ಯಾವುದೇ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ಮರಣ ದಂಡನೆಗೆ ಹೊಸ ದಿನಾಂಕವನ್ನು ನಿರ್ಧರಿಸಬೇಕೆಂದು ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.