ಬೆಂಗಳೂರು, ಮಾ. 05 (Daijiworld News/MB) : "ಕೊರೋನಾ ಸೋಂಕು ವರದಿಯಾಗಿರುವ ದೇಶಕ್ಕೆ 14 ದಿನಗಳಲ್ಲಿ ಭೇಟಿ ನೀಡಿ ವಾಪಾಸ್ ಆಗಿದ್ದಲ್ಲಿ ಈ ಕುರಿತಾಗಿ ಮಾಹಿತಿ ನೀಡಬೇಕು ಹಾಗೂ ಆ ದೇಶಕ್ಕೆ ಮತ್ತೆ ಪ್ರಯಾಣ ಮಾಡಬೇಕಾಗಿದ್ದರೂ ಇಲಾಖೆಯ ಅನುಮತಿ ಪಡೆಯಬೇಕು" ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ.
ನಗರದಲ್ಲಿ ಉದ್ಯೋಗ ಮಾಡುತ್ತಿದ್ದ ಟೆಕ್ಕಿಯೊಬ್ಬರಿಗೆ ಸೋಂಕು ತಗುಲಿರುವುದು ಅವರು ಹೈದಾರಾಬಾದ್ಗೆ ತೆರಳಿದ ಬಳಿಕ ದೃಢಪಟ್ಟಿದ್ದು, ಈ ಕಾರಣದಿಂದಾಗಿ ಆರೋಗ್ಯ ಇಲಾಖೆಯು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಐಟಿ–ಬಿಟಿ ಕಂಪನಿಗಳಿಗೆ ಸೂಚಿಸಿದೆ.
ಚೀನಾ, ಇರಾನ್, ಇರಾಕ್, ಕೊರಿಯಾ, ಇಟಲಿ, ಜಪಾನ್ ಸೇರಿದಂತೆ ಅಧಿಕ ಸೋಂಕು ಪ್ರಕರಣಗಳು ವರದಿಯಾದ 11 ದೇಶಗಳಿಗೆ ಪ್ರಯಾಣ ಮಾಡದಿರುವುದು ಒಳ್ಳೆಯದು. ಕೆಲಸ ಮಾಡುವ ಸ್ಥಳದಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಬುಧವಾರವೂ ಸೋಂಕು ತಗುಲಿದ ಹೈದರಾಬಾದ್ನ ಟೆಕ್ಕಿ ವಾಸವಿದ್ದ ಅಪಾರ್ಟ್ಮೆಂಟ್ ವಸತಿ ಸಮುಚ್ಚಯದ 92 ಮನೆಗಳ ನಿವಾಸಿಗಳ ಆರೋಗ್ಯವನ್ನು ತಪಾಸಣೆ ಮಾಡಲಾಗಿದ್ದು ಯಾವುದೇ ವ್ಯಕ್ತಿಯಲ್ಲಿ ಸೋಂಕಿನ ಶಂಕೆ ಕಾಣಿಸಿಕೊಂಡಿಲ್ಲ.
ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಅವರು ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಆರೋಗ್ಯಾಧಿಕಾರಿಗಳ ಜತೆಗೆ ಸಭೆ ನಡೆಸಿ, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.