ಬೆಂಗಳೂರು, ಮಾ. 05 (Daijiworld News/MB) : ಗುರುವಾರ ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯ ಬಜೆಟ್ ಮಂಡಿಸಲಿದ್ದಾರೆ.
ಆರ್ಥಿಕ ಹಿಂಜರಿತದಿಂದ ಉಂಟಾಗಿರುವ ಆದಾಯ ಕೊರತೆ ಮಧ್ಯೆಯೇ ಸಂಪನ್ಮೂಲ ಕ್ರೋಡೀಕರಣದ ಸವಾಲು ಎದುರಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಇದು ಚೊಚ್ಚಲ ಬಜೆಟ್ ಆದರೂ ಯಡಿಯೂರಪ್ಪನವರು ಮಂಡನೆ ಮಾಡುವ 7 ನೇ ಬಜೆಟ್ ಇದಾಗಿದೆ.
ಜೆಡಿಎಸ್–ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾಗ ಹಣಕಾಸು ಖಾತೆಯನ್ನು ಹೊಂದಿದ್ದ ಯಡಿಯೂರಪ್ಪ ಈಗಲೂ ಈ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಆ ಲೆಕ್ಕಾಚಾರದಲ್ಲಿ ಯಡಿಯೂರಪ್ಪ ಮಂಡಿಸುತ್ತಿರುವ ಏಳನೇ ಬಜೆಟ್ ಇದಾಗಲಿದೆ.
ಜನಪ್ರಿಯ ಯೋಜನೆಗಳಿಗೆ ಅನುದಾನವನ್ನು ಮೊಟಕು ಮಾಡದೆ ವಿತ್ತೀಯ ಕೊರತೆಯನ್ನು ನಿಯಂತ್ರಣಕ್ಕೆ ತರುವ ಯೋಜನೆಯನ್ನು ಬಿಎಸ್ವೈ ಮಾಡಬೇಕಾಗಿದೆ.
ಕಳೆದ ಸಾಲಿನ ಬಜೆಟ್ ಗಾತ್ರ ₹2,34,153 ಕೋಟಿ ಇದ್ದು, ಹೊಸ ಬಜೆಟ್ ಗಾತ್ರ ₹2.50 ಲಕ್ಷ ಕೋಟಿ ದಾಟುವ ನಿರೀಕ್ಷೆ ಇದೆ.
ಕೇಂದ್ರ ಸರ್ಕಾರವು ರಾಜ್ಯಗಳ ತೆರಿಗೆ ಪಾಲನ್ನೂ ಕಡಿಮೆ ಮಾಡಿದ್ದರಿಂದ ರಾಜ್ಯಕ್ಕೆ ಆದಾಯ ಕುಸಿತವಾಗಿದೆ. ಮತ್ತೊಂದೆಡೆ ಹೆಚ್ಚು ಆದಾಯ ತರುವ ಸಾರಿಗೆ, ಮುದ್ರಾಂಕ ಮತ್ತು ನೋಂದಣಿ ಇಲಾಖೆಗಳಲ್ಲೂ ಆದಾಯ ಕುಸಿದಿದೆ. ಈ ಹಿನ್ನಲೆಯಲ್ಲಿ ಅಬಕಾರಿ ಹಾಗೂ ಸಾರಿಗೆ ಇಲಾಖೆಯ ಮೂಲಕವೇ ಸಂಪನ್ಮೂಲ ಸಂಗ್ರಹಕ್ಕೆ ಒತ್ತು ನೀಡುವ ಸಾಧ್ಯತೆ ಹೆಚ್ಚಾಗಿದೆ.
ಹಾಗೆಯೇ ಕೃಷಿ ಮತ್ತು ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ. ಕೃಷ್ಣಾ ಮೇಲ್ದಂಡೆ ಮತ್ತು ಮಹದಾಯಿ ಯೋಜನೆಗಳಿಗೆ ಹೆಚ್ಚು ಅನುದಾನ, 35 ಸಾವಿರ ಕೆರೆಗಳಿಗೆ ನೀರು ತುಂಬಿಸುವ ಹೊಸ ಯೋಜನೆ ಘೋಷಿಸಿದ್ದು, ಅದಕ್ಕೆ ಅನುದಾನ ಪ್ರಕಟಿಸಬಹುದು. ಇದರ ಜತೆಗೆ ಕೃಷಿ, ಕೂಲಿ–ಕಾರ್ಮಿಕರಿಗೆ ಬಡವರಿಗೆ ಕೆಲವು ಯೋಜನೆಗಳನ್ನು ಘೋಷಿಸಬಹುದು. ಹಾಗೆಯೇ ಕೆಲವು ಜನಪ್ರಿಯ ಯೋಜನೆಗಳನ್ನು ಕೈಬಿಡುವ ಸಾಧ್ಯತೆಯೂ ಇದೆ.