ಬೆಂಗಳೂರು, ಮಾ. 05 (Daijiworld News/MB) : ಯುವ ಉದ್ಯಮಿ ಹಾಗೂ ಫ್ಲಿಪ್ಕಾರ್ಟ್ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ಸಚಿನ್ ಬನ್ಸಾಲ್ ವಿರುದ್ಧ ಅವರ ಪತ್ನಿ ಪ್ರಿಯಾ ಬನ್ಸಾಲ್ ವರದಕ್ಷಿಣೆ ಕಿರುಕುಳದ ದೂರು ನೀಡಿದ್ದು, ಸಚಿನ್ ಅವರ ಮೇಲೆ ಕೋರಮಂಗಲ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಫೆ. 28ರಂದು ಬನ್ಸಾಲ್ ವಿರುದ್ಧ ಐಪಿಸಿ ಸೆಕ್ಷನ್ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯಡಿ ಎಫ್ಐಆರ್ ದಾಖಲು ಮಾಡಲಾಗಿದ್ದು ಈಗಾಗಲೇ ಪ್ರಕರಣದ ತನಿಖೆ ಆರಂಭಗೊಂಡಿದೆ ಎಂದು ಕೋರಮಂಗಲ ಠಾಣಾಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಹಾಗೆಯೇ ಈ ದೂರಿನಲ್ಲಿ ಪ್ರಿಯಾ ಬನ್ಸಾಲ್ ಅವರು, ಈ ದೂರಿನಲ್ಲಿ ಪತಿ ಸಚಿನ್ ಬನ್ಸಾಲ್ ಅವರನ್ನು ಮಾತ್ರವಲ್ಲದೇ ಸಚಿನ್ ಅವರ ತಂದೆ ಸತ್ಪ್ರಕಾಶ್ ಅಗರವಾಲ್, ತಾಯಿ ಕಿರಣ್ ಬನ್ಸಾಲ್, ಸಹೋದರ ನಿತಿನ್ ಬನ್ಸಾಲ್ ಹೆಸರನ್ನು ಕೂಡ ಉಲ್ಲೇಖ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಿಯಾ ಅವರು ದೂರಿನಲ್ಲಿ, "ಸಚಿನ್ ಜೊತೆ ನನ್ನ ವಿವಾಹ ಚಂಡೀಘಡದಲ್ಲಿ 2008ರ ಏ. 28ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಜರುಗಿತ್ತು. ವಿವಾಹಕ್ಕೂ ಮೊದಲೇ ಸಚಿನ್ ಅವರ ತಾಯಿ, ತಂದೆ ಮತ್ತು ಸಹೋದರ ವಿವಾಹದ ಸಂದರ್ಭದಲ್ಲಿ ವರದಕ್ಷಿಣೆ ಹಾಗೂ ಉಡುಗೊರೆಗಳನ್ನು ಕೊಡುವಂತೆ ಬೇಡಿಕೆ ಮಾಡಿದ್ದರು. ಹಾಗಾಗಿ ನನ್ನ ತಂದೆ ಸುಮಾರು 50 ಲಕ್ಷ ರೂಪಾಯಿ ಖರ್ಚು ಮಾಡಿ ನನ್ನ ವಿವಾಹ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೇ ವಿವಾಹದ ಹಿಂದಿನ ದಿನವೇ ಉಡುಗೊರೆಯಾಗಿ ಕಾರನ್ನು ಕೊಡುವ ಬದಲಾಗಿ 11 ಲಕ್ಷ ರೂಪಾಯಿಯನ್ನು ಸಚಿನ್ ಪಡೆದುಕೊಂಡಿದ್ದರು" ಎಂದು ಆರೋಪ ಮಾಡಿದ್ದಾರೆ.
ವಿವಾಹದ ನಂತರ ನಾನು ಪತಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದೆ. ನಮಗೆ ಗಂಡು ಮಗುವಿದೆ. ವಿವಾಹಕ್ಕೂ ಮೊದಲು ವರದಕ್ಷಿಣೆಗಾಗಿ ಸಚಿನ್ ಹಾಗೂ ಅವರ ಕುಟುಂಬ ಬೇಡಿಕೆ ಇಟ್ಟಿದ್ದಲ್ಲದೇ, ವಿವಾಹ ಆದಾಗಿನಿಂದಲೂ ವರದಕ್ಷಿಣೆಗಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಲಿದ್ದಾರೆ. ಅಷ್ಟು ಮಾತ್ರವಲ್ಲದೇ ದೆಹಲಿಯಲ್ಲಿನನ್ನ ತಂಗಿ ಮೇಲೆ ಪತಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿದ್ದಾರೆ.
ನನ್ನ ಪತಿ ಜೊತೆ ಅತ್ತೆ, ಮಾವ, ಮೈದುನ ಕೂಡ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ. ನನ್ನ ಹೆಸರಿನಲ್ಲಿರುವ ಆಸ್ತಿಯನ್ನು ತಮ್ಮ ಹೆಸರಿಗೆ ಬದಲಾಯಿಸಿಕೊಳ್ಳಲು ಸಚಿನ್ ಪ್ರಯತ್ನಿಸಿದ್ದರು. ಇದಕ್ಕೆ ನಾನು ಒಪ್ಪಿಗೆ ನೀಡದ ಕಾರಣ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಕಾರಣದಿಂದಾಗಿ ಈ ನಾಲ್ವರು ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.