ಬೆಂಗಳೂರು, ಮಾ 5(Daijiworld News/MSP): ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದ ನಾಯಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2020-21ನೇ ಸಾಲಿನ ಪರಿಷ್ಕೃತ ಬಜೆಟ್ ಮಂಡನೆ ಆರಂಭಿಸಿದ್ದಾರೆ. ಇದು ಯಡಿಯೂರಪ್ಪ ಅವರ 7ನೇ ಬಜೆಟ್ ಆಗಿದ್ದು, ಈ ಹಿಂದೆ 2006ರಲ್ಲಿ ಜೆಡಿಎಸ್ ಮತ್ತು ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಡಿಸಿಎಂ ಆಗಿದ್ದ ವೇಳೆ 2 ಬಾರಿ, ನಂತರ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ 4 ಬಾರಿ ಬಜೆಟ್ ಮಂಡಿಸಿದ್ದರು. ಇನ್ನು ಕಳೆದ ಬಾರಿಯ ಬಜೆಟ್ ಗಾತ್ರ 2 ಲಕ್ಷದ 34 ಸಾವಿರ ಕೋಟಿಯಾಗಿದ್ದು, ಈ ಬಾರಿಯ ಬಜೆಟ್ ಗಾತ್ರ 2 ಲಕ್ಷದ 37 ಸಾವಿರ ಕೋಟಿ ರೂಪಾಯಿಯಾಗಿದೆ.
ಇನ್ನು ಬಜೆಟ್ ಮಂಡನೆಯ ವೇಳೆ ಕರ್ನಾಟಕವೂ ಅರ್ಥಿಕ ಸಂಕಷ್ಟದಲ್ಲಿದ್ದು ಇದೀಗ ಚೇತರಿಕೆ ಕಾಣುತ್ತಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಕಡಿಮೆಯಾಗಿದೆ ಎಂದ ಬಿಎಸ್ ವೈ. ರೂ.8883 ಕೋಟಿ ಅನುದಾನ ಕಡಿಮೆಯಾಗಿದೆ. ಮಾತ್ರವಲ್ಲದೇ ಕೇಂದ್ರದ ತೆರಿಗೆಯಲ್ಲಿ ರಾಜ್ಯದ ಪಾಲು ಕಡಿಮೆಯಾಗಿದ್ದು ಕೇಂದ್ರದಿಂದ ಬರಬೇಕಿದ್ದ ಜಿಎಸ್ ಟಿ ಕೂಡಾ 11 ಸಾವಿರ ಕಡಿತವಾಗಿದೆ. ಹೀಗಾಗಿ ರಾಜ್ಯದ ಅನುದಾನವೂ ಕಡಿಮೆಯಾಗಿದೆ ಎಂದರು.
ಪ್ರವಾಹ, ಬರ ಹಾಗೂ ಇನ್ನಿತರ ಕಾರಣಗಳಿಂದ ರಾಜ್ಯದ ರಾಜಸ್ವ ಸಂಪನ್ಮೂಲ ಕಡಿತವಾಗಿದ್ದು, ಇನ್ನು ಮುಂದೆ ರಾಜ್ಯದ ಸ್ವಂತ ಸಂಪನ್ಮೂಲ ಹೆಚ್ಚಳಕ್ಕೆ ಆಧ್ಯತೆ ನೀಡಲಾಗುವುದು ಎಂದರು.