ಚಿಕ್ಕಬಳ್ಳಾಪುರ, ಮಾ. 05 (Daijiworld News/MB) : ಕೊರೋನಾ ವೈರಸ್ ವಿಶ್ವದಾದ್ಯಂತ ಆತಂಕ ಸೃಷ್ಟಿ ಮಾಡಿದ್ದು ಭಾರತದಲ್ಲೂ ಭೀತಿಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಹಲವು ಕಡೆಗಳಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಮುನ್ನೆಚ್ಚರಿಕೆಯ ಕ್ರಮದ ಭಾಗವಾಗಿ ಚಿಕ್ಕಬಳ್ಳಾಪುರ ನಗರದ ಖಾಸಗಿ ಶಾಲೆಯೊಂದು ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಹಾಗೂ ಸ್ಯಾನಿಟೈಜರ್ ತೆಗೆದುಕೊಂಡು ಶಾಲೆಗೆ ಬರುವಂತೆ ಸೂಚನೆ ನೀಡಿದೆ.
ಈ ಸೂಚನೆಯನ್ನು ನಗರದ ಖಾಸಗಿ ಶಾಲಾ ಆಡಳಿತ ಮಂಡಳಿ ನೀಡಿದೆ. ಒಂದನೇ ತರಗತಿಯಿಂದ 10ನೇ ತರಗತಿಯವರೆಗಿನ ಈ ಶಾಲೆಯಲ್ಲಿ ಸರಿಸುಮಾರು 480 ವಿದ್ಯಾರ್ಥಿಗಳಿದ್ದು, ಬಹುತೇಕ ವಿದ್ಯಾರ್ಥಿಗಳು ಗುರುವಾರ ಮುಖಕ್ಕೆ ಮಾಸ್ಕ್ ಧರಿಸಿ, ಸ್ಯಾನಿಟೈಜರ್ನೊಂದಿಗೆ ಶಾಲೆಗೆ ಆಗಮಿಸಿದ್ದಾರೆ.
ಕೊರೋನಾ ವೈರಸ್ ದೇಶದ ಇತರೆ ಭಾಗಗಳಲ್ಲಿಯೂ ಹರಡಿದ್ದು ಈ ಕಾರಣದಿಂದಾಗಿ ಮುಂಜಾಗ್ರತೆಗಾಗಿ ವಿದ್ಯಾರ್ಥಿಗಳಿಗೆ ಈ ಸೋಂಕು ತಗಲದಂತೆ ಎಚ್ಚರಿಕೆ ವಹಿಸಲು ಈ ಕ್ರಮ ಕೈಗೊಂಡಿದ್ದೇವೆ. ವಿದ್ಯಾರ್ಥಿಗಳು ಮನೆಯಲ್ಲಿ ಇರುವುದಕ್ಕಿಂತ ಹೆಚ್ಚಿನ ಸಮಯದಲ್ಲಿ ಶಾಲೆಯಲ್ಲಿ ಇರುತ್ತಾರೆ. ಅವರು ನಮ್ಮ ಮಕ್ಕಳಂತೆ, ಹಾಗಾಗಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಕರ್ತವ್ಯ ಎಂದು ಶಿಕ್ಷಕಿ ವಿಜಯಲಕ್ಷ್ಮಿ ಹೇಳಿದ್ದಾರೆ.
ಇನ್ನೂ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಜರ್ ತರಲು ಶಾಲಾ ಆಡಳಿತ ಮಂಡಳಿ ಸೂಚಿಸಿದ್ದ ಹಿನ್ನೆಲೆ, ನಗರದ ಎಲ್ಲಾ ಮೆಡಿಕಲ್ ಶಾಪ್ಗಳಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಜರ್ ಗಳು ಖಾಲಿಯಾಗಿವೆ ಎಂದು ವರದಿಯಾಗಿದೆ.
ಪ್ರಸ್ತುತ ಬಹುತೇಕ ಮೆಡಿಕಲ್ ಶಾಪ್ಗಳಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಜರ್ ಲಭ್ಯವಿಲ್ಲ. 5 ರೂಪಾಯಿಯ ಮಾಸ್ಕ್ 15-20 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಸ್ಯಾನಿಟೈಜರ್ ಸಹ ಎಂಆರ್ಪಿಗಿಂತ 5-10 ರೂಪಾಯಿ ಹೆಚ್ಚಿಗೆ ಮಾರಾಟ ಮಾಡಲಾಗುತ್ತಿದೆ. ಮೆಡಿಕಲ್ ಶಾಪ್ ಮಾಲೀಕರು ಕೂಡಾ ಮಾಸ್ಕ್ ಹಾಗೂ ಸ್ಯಾನಿಟೈಜರ್ನ್ನು ಹೆಚ್ಚಿಗೆ ತರಿಸಿಕೊಳ್ಳಲು ಮುಂದಾಗಿದ್ದಾರೆ.