ಬೆಂಗಳೂರು, ಮಾ.05 (DaijiworldNews/PY) : ಮಲೆನಾಡಿನ ರೈತರ ಪ್ರಮುಖ ಬೇಡಿಕೆಯಾಗಿದ್ದ ಸಾಲಮನ್ನಾ ಬಗ್ಗೆಯೂ ಬಜೆಟ್ನಲ್ಲಿ ಘೋಷಿಸಲಾಗಿದ್ದು, ಅಡಕೆ ಬೆಳೆಗಾರರ 2 ಲಕ್ಷದವರೆಗಿನ ಸಾಲದ ಶೇ. 5ರಷ್ಟು ಬಡ್ಡಿ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಘೋಷಿಸಿದ್ದಾರೆ.
ಸಿಎಂ ಯಡಿಯೂರಪ್ಪ ಈ ಬಾರಿಯ ಬಜೆಟ್ನಲ್ಲಿ ಕೃಷಿ ಯಂತ್ರೋಪಕರಣಗಳ ಖರೀದಿಗೆ ಪಡೆಯಲಾದ ಸಾಲದ ಬಡ್ಡಿ ಮನ್ನಾ ಮಾಡುವುದಾಗಿ ಘೋಷಿಸಿದ್ದು, ಇದರೊಂದಿಗೆ, ಮಲೆನಾಡು ಹಾಗೂ ಕರಾವಳಿ ಭಾಗದ ಅಡಿಕೆ ಕೃಷಿಕರು ಪಡೆದಿರುವ 2 ಲಕ್ಷದವರೆಗಿನ ಸಾಲದ ಮೇಲೆ ಶೇ. 5ರಷ್ಟು ಬಡ್ಡಿ ಮನ್ನಾ ಮಾಡುವುದಾಗಿಯೂ ಘೋಷಿಸಿದ್ದಾರೆ.
ಇದರ ಜೊತೆ, ರೇಷ್ಮೆ ಹುಳು ಸಂರಕ್ಷಣಾ ಘಟಕ, ಹೈನುಗಾರಿಕಾ ವಲಯ, ಹಂದಿ ಸಾಕಾಣಿಕೆಗೆ ಹೆಚ್ಚಿನ ಆದ್ಯತೆ. ತೋಟಗಾರಿಕೆ ಬೆಳೆ ವಿಸ್ತರಣೆಗೆ 75 ಕೋಟಿ ರೂ. ವೆಚ್ಚದಲ್ಲಿ ಶೀಥಲೀಕರಣ ಘಟಕ ಸ್ಥಾಪಿಸಲಾಗುವುದು. ಕೃಷಿ ಉತ್ಪನ್ನಗಳ ಸಾಗಾಟಕ್ಕೆ ರೈಲಿನ ನೆರವು ನೀಡಲಾಗುವುದು. ಸಾವಯವ ಕೃಷಿಗೆ 200 ಕೋಟಿ ರೂ. ನೀಡಲಾಗುವುದು. ಶೀಘ್ರದಲ್ಲೇ ಹೊಸ ಕೃಷಿ ನೀತಿ ಜಾರಿಗೆ ತರಲಾಗುವುದು. ಸಣ್ಣ ಹಾಗೂ ಅತಿಸಣ್ಣ ರೈತರಿಗೆ 10 ಸಾವಿರ ಕೋಟಿ ರೂ. ನೀಡಲಾಗುವುದು ಎಂದು ಘೋಷಿಸುವ ಮೂಲಕ ಸಿಎಂ ಯಡಿಯೂರಪ್ಪ ರಾಜ್ಯದ ರೈತರಿಗೆ ಸಿಹಿಸುದ್ದಿ ನೀಡಿದ್ದಾರೆ.