ನವದೆಹಲಿ, ಮಾ. 05 (Daijiworld News/MB) : ಕೊರೋನಾ ವೈರಸ್ ಸೋಂಕು ತಡೆಯಲು ಭಾರತೀಯ ಶಿಷ್ಟಾಚಾರವಾದ ಕೈಮುಗಿದು ಸ್ವಾಗತ ಕೋರುವುದು ಉತ್ತಮ ಕ್ರಮ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಭಾರತೀಯರು ಭೇಟಿಯಾದಾಗ ಹಸ್ತಲಾಘನ ಮಾಡುವ ಬದಲು ನಮಸ್ತೆ ಎಂದು ಕೈಮುಗಿಯುತ್ತಾರೆ. ಕೊರೋನಾ ಸೋಂಕು ಹರಡದಂತೆ ಮುನ್ನಚ್ಚರಿಕೆ ಕ್ರಮದ ಭಾಗ ಇದೊಂದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ನೀವೂ ಕೂಡಾ ನನ್ನಂತೆ ಶೇಕ್ ಹ್ಯಾಂಡ್ ಮಾಡುವ ಬದಲಾಗಿ ನಮಸ್ತೆ ಎಂದು ಹೇಳಿ ಕೈಮುಗಿಯಬಹುದು. ಅದು ಬೇಡ ಎಂದಾದರೆ ಸಲಾಂ ಎದೋ ಅಥವಾ ಬೇರೆ ಯಾವುದಾದರೂ ಪದ ಬಳಸಿ ಪರಸ್ಪರರನ್ನು ಗೌರವಿಸಿ. ಆದರೆ ಶೇಕ್ ಹ್ಯಾಂಡ್ ಮಾತ್ರ ಮಾಡಲೇ ಬೇಡಿ" ಎಂದು ಅವರು ಒತ್ತಾಯಿಸಿದ್ದಾರೆ.
ಕೊರೋನಾ ವೈರಸ್ ಕೆಮ್ಮು, ಸೀನಿನಿಂದ ಹರಡುವ ಎಂಜಲಿನ ಕಣಗಳಿಂದ ಹರಡುತ್ತದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸೋಂಕಿತರ ಸಂಪರ್ಕದಿಂದ ದೂರ ಇರುವುದು, ಸೋಂಕು ನಿವಾರಕಗಳನ್ನು ಬಳಸಿ ಪದೇಪದೆ ಕೈತೊಳೆಯುಬೇಕು.
ಕೊರೋನಾ ಸೋಂಕು ನಿವಾರಣೆಗಾಗಿ ತೆಗೆದುಕೊಂಡ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೆತನ್ಯಾಹು ಅವರು, "ಇಸ್ರೇಲ್ನಲ್ಲಿ ಸೋಂಕು ಹರಡುವುದನ್ನು ತಡೆಯಲು ಸಾಕಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಐಸೊಲೇಶನ್ ಕೇಂದ್ರಗಳನ್ನು ಸ್ಥಾಪನೆ ಮಾಡಿದ್ದೇವೆ. ಹಾಗೆಯೇ ವಿಮಾನ ಹಾರಾಟ ನಿಯಮಗಳಲ್ಲಿಯೂ ಬದಲಾವಣೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಗೆಳೆತನ ಹೊಂದಿರುವ ನೆತನ್ಯಾಹು ಅವರಿಗೆ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಹೆಚ್ಚು ಒಲವು. ನೆತನ್ಯಾಹು ಅವರು ಜನವರಿ 2018ರಂದು ದೆಹಲಿಗೆ ಭೇಟಿ ನೀಡಿದ್ದರು, 2017ರಲ್ಲಿ ನರೇಂದ್ರ ಮೋದಿ ಟೆಲ್ ಅವೀವ್ಗೆ ಭೇಟಿ ನೀಡಿದ್ದರು. ಈ ಸಂದರ್ಭ ವಿಮಾನ ನಿಲ್ದಾಣದಲ್ಲಿಯೇ ಇಬ್ಬರೂ ನಾಯಕರು ಪರಸ್ಪರರನ್ನು ಸ್ವಾಗತಿಸಿದ್ದರು.