ಬೆಂಗಳೂರು, ಮಾ.05 (DaijiworldNews/PY) : "ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಲ್ಲಿಯವರೆಗೆ ಮಂಡಿಸಿದ್ದ ಏಳು ಬಜೆಟ್ಗಳಲ್ಲಿ ಈ ಬಾರಿಯ ಬಜೆಟ್ ಕಳೆಗುಂದಿದ ಬಜೆಟ್ ಆಗಿದೆ. ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ" ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಎಂ ಬಿಎಸ್ವೈ ಅವರು ಹುರುಪಿನಿಂದ ಸರ್ಕಾರ ಮಾಡಿದರು. ಆದರೆ, ಅಷ್ಟೇ ಹುರುಪಿನಿಂದ ಅವರು ಬಜೆಟ್ ಮಂಡನೆ ಮಾಡಿಲ್ಲ. ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ" ಎಂದರು.
"ಮುಖ್ಯಮಂತ್ರಿಗಳೇ ರಾಜ್ಯದ ಆರ್ಥಿಕತೆ ಸರಿಯಿಲ್ಲ ಎನ್ನುವುದನ್ನು ಒಪ್ಪಿಕೊಂಡಿದ್ದು, ಬಜೆಟ್ನಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ" ಎಂದು ತಿಳಿಸಿದ್ದರು.
"ಕಾಂಗ್ರೆಸ್ ಸರ್ಕಾರಗಳ ಅವಧಿಗಳಲ್ಲಿ ಜಾರ ಮಾಡಿದ್ದ ಯೋಜನೆಗಳಿಗೆ ಈ ಸರ್ಕಾರ ಹೊಸ ಹೆಸರುಗಳನ್ನು ಸೂಚಿಸಿದೆ ಹೊರತು ಬೇರೆ ಏನು ಮಾಡಿಲ್ಲ" ಎಂದು ಹೇಳಿದರು.
"ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿ, ಲಂಬಾಣಿ ಸಮುದಾಯದವರನ್ನು ಕಡೆಗಣಿಸಲಾಗಿದೆ. ಹಸಿರು ಶಾಲು ಹಾಕಿಕೊಂಡರೆ ರೈತರ ಪರ ಎಂದಾಗುವುದಿಲ್ಲ" ಎಂದರು.