ನವದೆಹಲಿ, ಮಾ 5(Daijiworld News/MSP): ಇಡೀ ದೇಶದೆಲ್ಲೆಡೆ ತಲ್ಲಣ ಮೂಡಿಸಿದ್ದ ಹಾಗೂ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳ ಆಯಸ್ಸು ಕೊನೆಗೂ ಮುಗಿದಂತೆ ಕಾಣುತ್ತಿದೆ. ದೆಹಲಿಯ ಪಟಿಯಾಲ ಕೋರ್ಟ್ ನಿರ್ಭಯಾ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಇಂದು ಹೊಸ ಡೆತ್ ವಾರಂಟ್ ಜಾರಿಗೊಳಿದೆ.
ಇದೇ ಮಾರ್ಚ್ ೨೦ ರಂದು ಬೆಳಗ್ಗೆ 6 ಗಂಟೆಗೆ ನಾಲ್ವರು ಆರೋಪಿಗಳನ್ನೂ ನೇಣಿಗೇರಿಸಲು ಡೆತ್ ವಾರೆಂಟ್ ಜಾರಿ ಮಾಡಲಾಗಿದೆ.
ನಿರ್ಭಯಾ ಅತ್ಯಾಚಾರಿ ಆರೋಪಿ ಪವನ್ ಸಲ್ಲಿಸಿದ್ದ ಕ್ಷಮಾಧಾನ ಅರ್ಜಿಯನ್ನು ಕಳೆದ ನಿನ್ನೆಯಷ್ಟೇ ರಾಷ್ಟ್ರಪತಿಗಳು ತಿರಸ್ಕರಿಸಿದ್ದರು. ಇದಕ್ಕೂ ಪೂರ್ವದಲ್ಲಿ ಆರೋಪಿಗಳು ಸಲ್ಲಿಸಿದ್ದ ಕ್ಷಮಾಧಾನ ಕೋರಿದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಪಾಟಿಯಾಲ ಕೋರ್ಟ್, ಗಲ್ಲು ಶಿಕ್ಷೆಯನ್ನು ಮುಂದೂಡಿತ್ತು.
ಈಗಾಗಲೇ ಅಪರಾಧಿಗಳಿಗೆ ಇರುವ ಎಲ್ಲಾ ಕಾನೂನು ಮಾರ್ಗಗಳನ್ನು ಅವರು ಬಳಸಿಕೊಂಡಿದ್ದು, ಇನ್ನು ಅವರಿಗೆ ಯಾವುದೇ ಅವಕಾಶವಿಲ್ಲದಂತಾಗಿದೆ. ಒಂದಿಲ್ಲೊಂದು ಕಾರಣ ನೀಡಿ ಎಲ್ಲಾ ಕಾನೂನಿನ ಮಾರ್ಗಗಳನ್ನು ಬಳಸಿ ಮೂರು ಬಾರಿ ಡೆತ್ ವಾರೆಂಟ್ ನಿಂದ ತಪ್ಪಿಸಿಕೊಂಡಿದ್ದ ನಿರ್ಭಯಾ ಅತ್ಯಾಚಾರಿಗಳ ವಿರುದ್ಧ ಇದೀಗ ನಾಲ್ಕನೇ ಡೆತ್ ವಾರೆಂಟ್ ಜಾರಿಯಾಗಿದ್ದು , ಈ ಹಿನ್ನಲೆಯಲ್ಲಿ ನಿರ್ಭಯಾ ಅತ್ಯಾಚಾರಿಗಳಾದ ಮುಖೇಶ್, ಪವನ್ ಗುಪ್ತಾ, ವಿನಯ್ ಶರ್ಮಾ ಮತ್ತು ಅಕ್ಷಯ್ ಕುಮಾರ್ ಸಿಂಗ್ ಗಲ್ಲಿಗೇರುವುದು ಬಹುತೇಕ ಖಚಿತವಾಗಿದೆ.