ಬೆಂಗಳೂರು, ಮಾ.05 (DaijiworldNews/PY) : "ಪ್ರಸ್ತುತ ರಾಜ್ಯ ಬಜೆಟ್ನಲ್ಲಿ ಹಳೆಯ ಯೋಜನೆಗಳನ್ನು ಬಿಟ್ಟರೆ ಹೊಸ ಯೋಜನೆ ಅಂತ ಯಾವುದೂ ಇಲ್ಲ. ರಾಜ್ಯ ಬಜೆಟ್ನಲ್ಲಿ ಸತ್ವವೇ ಇಲ್ಲ. ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯವನ್ನು ಪ್ರಶ್ನೆ ಮಾಡುವ ತಾಕತ್ತು ಯಾರಿಗೂ ಇಲ್ಲ" ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಗುರುವಾರ ನಡೆದ ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಟೀಲ್ ಅವರು, "ಕಾನೂನು ಪ್ರಕಾರವಾಗಿ ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಾದ ಹಣ ಇನ್ನೂ ಸಿಕ್ಕಿಲ್ಲ. ರಾಜ್ಯದ ಯಾವ ಬಿಜೆಪಿ ನಾಯಕನಿಗೂ ಅವರ ವಿರುದ್ದ ಪ್ರಶ್ನೆ ಮಾಡುವ ತಾಕತ್ತು ಇಲ್ಲ. 25 ಜನ ಬಿಜೆಪಿ ಸಂಸದರು ಇದ್ದೂ ಪ್ರಯೋಜನವಾಗಿಲ್ಲ. ಎಲ್ಲಿ ಪ್ರಶ್ನೆ ಮಾಡಿದರೆ ತಮ್ಮ ಖರ್ಚಿಗೆ ಅಪಾಯ ಬರುತ್ತದೆ ಎಂದು ಕೇಳದೇ ಭಯದಲ್ಲೇ ಬದುಕುತ್ತಿದ್ದಾರೆ" ಎಂದರು.
"ಬಿ.ಎಸ್ ಯಡಿಯೂರಪ್ಪ ಅವರು ಹಣವೇ ಇಲ್ಲದ ಮೇಲೆ ಹೇಗೆ ಬಜೆಟ್ನಲ್ಲಿನ ಯೋಜನೆಗಳನ್ನು ಪೂರೈಸುತ್ತಾರೆ. ಈ ಬಜೆಟ್ನಲ್ಲಿ ಹೊಸ ಯೋಜನೆ ಎಂದು ಯಾವುದೂ ಇಲ್ಲ. ಬದಲಾಗಿ ಹಳೆಯ ಯೋಜನೆಗಳನ್ನೇ ಮುಂದುವರೆಸಲಾಗಿದೆ. ಈ ಬಜೆಟ್ನಲ್ಲಿ ರೈತರಿಗೆ ಅನ್ಯಾಯ ಮಾಡಲಾಗಿದೆ. ಇದು ಅನವಶ್ಯಕ, ಸತ್ವ ಇಲ್ಲದ ಹಾಗೂ ನೀರಸ ಬಜೆಟ್" ಎಂದು ತಿಳಿಸಿದ್ದಾರೆ.