ಬೆಂಗಳೂರು, ಮಾ.05 (DaijiworldNews/PY) : ಈ ಬಾರಿಯ ಬಜೆಟ್ನಲ್ಲಿ ಮಕ್ಕಳಿಗೂ ಆದ್ಯತೆ ನೀಡಲಾಗಿದೆ. ಇದೇ ಮೊದಲ ಬಾರಿಗೆ ಮಕ್ಕಳ ಬಜೆಟ್ ಮಂಡನೆ ಮಾಡಲಾಗಿದ್ದು, ಪ್ರತೀ ತಿಂಗಳ ಎರಡು ಶನಿವಾರವೂ ಮಕ್ಕಳು ಶಾಲೆಗೆ ಬ್ಯಾಗ್ ತರುವಂತಿಲ್ಲ ಎಂಬ ನೂತನ ಯೋಜನೆಯನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ.
ರಾಜ್ಯ ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಾಲಾ ಮಕ್ಕಳ ಬ್ಯಾಗ್ ಹೊರೆಯನ್ನು ತಪ್ಪಿಸಲು ಈ ಯೋಜನೆಗೆ ಆದ್ಯತೆ ನೀಡಿದ್ದರು. ಸಿಎಂ ಯಡಿಯೂರಪ್ಪ ವರು ಬಜೆಟ್ನಲ್ಲಿ ಇದಕ್ಕೆ ಅನುಮೋದನೆ ನೀಡಿದ್ದಾರೆ. ಪ್ರತಿ ಶನಿವಾರ ರಾಜ್ಯದ ಎಲ್ಲ ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಬ್ಯಾಗ್ ರಹಿತ ದಿನವನ್ನಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಎರಡು ಶನಿವಾರವೂ ಸಂಭ್ರಮದ ಶನಿವಾರ ಆಚರಣೆ ಮಾಡಲು ಸರ್ಕಾರ ತೀರ್ಮಾನಿಸಿದೆ.
ಶನಿವಾರ ಶಾಲೆಗಳಲ್ಲಿ ಪುಸ್ತಕಗಳ ಬದಲು ಪಠ್ಯೇತರ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಪ್ರತೀ ಶಾಲೆಗಳಲ್ಲಿ ಶಿಕ್ಷಣ ಇಲಾಖೆ ರೂಪಿಸಿರುವ ಮಾರ್ಗಸೂಚಿ ಅನ್ವಯ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಹಾಗಾಗಿ ಇದರಿಂದ ಬ್ಯಾಗ್ ಹೊರೆ ತಪ್ಪುವುದರೊಂದಿಗೆ ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಯ ಮಹತ್ವದ ಅರಿವು ಮೂಡಿಸಲಾಗುತ್ತದೆ. ಅಲ್ಲದೇ, ಮಕ್ಕಳ ಹಾಜರಾತಿಯೂ ಹೆಚ್ಚಾಗಲಿದೆ ಎಂದು ಹೇಳಲಾಗುತ್ತದೆ.
ಅಲ್ಲದೇ, ಪ್ರಸ್ತುತ ರಾಜ್ಯ ಬಜೆಟ್ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಿಕ್ಷಕ ಮಿತ್ರ ಮೊಬೈಲ್ ಆ್ಯಪ್ ಬಿಡುಗಡೆ ಮಾಡುವ ಬಗ್ಗೆಯೂ ಮಂಡಿಸಿದ್ದಾರೆ.