ಚನ್ನಪಟ್ಟಣ, ಮಾ.05 (DaijiworldNews/PY) : "ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಕುಮಾರಸ್ವಾಮಿ ಅವರು ಮಾತ್ರ. ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ದಿನ ಬರುತ್ತದೆ" ಎಂದು ನಂಜಾವಧೂತ ಸ್ವಾಮೀಜಿ ಭವಿಷ್ಯ ನುಡಿದರು.
ಚನ್ನಪಟ್ಟಣದ ದೊಡ್ಡಮಳೂರಿನಲ್ಲಿ ನಡೆದ ಬಮೂಲ್ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಕುಮಾರಸ್ವಾಮಿ ಅವರು ಅಧಿಕಾರದಲ್ಲಿ ಇದ್ದ ಸಂದರ್ಭ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ, ಅವರು ಮಾಡಿರುವ ಕೆಲಸ ಕಾರ್ಯಗಳು ಸರಿಯಾಗಿ ಪ್ರಚಾರವಾಗಿಲ್ಲ. ಈಗ ಯಡಿಯೂರಪ್ಪ ಅವರು ರಾಜ್ಯದಲ್ಲಿ ಸಿಎಂ ಆಗಿದ್ದಾರೆ. ಅವರೂ ಕೂಡಾ ಉತ್ತಮ ಕಾರ್ಯಗಳನ್ನು ಮಾಡಬೇಕಿದೆ. ಕುಮಾರಸ್ವಾಮಿ ಅವರು ಯಡಿಯೂರಪ್ಪ ಸರ್ಕಾರಕ್ಕೆ ಯಾವ ತೊಂದರೆಯನ್ನೂ ಮಾಡುವುದಿಲ್ಲ" ಎಂದು ಹೇಳಿದರು.
ಈ ಸಂದರ್ಭ ಮಾತನಾಡಿದ ಕುಮಾರಸ್ವಾಮಿ ಅವರು, "ಯಡಿಯೂರಪ್ಪ ಸರ್ಕಾರವನ್ನು ಬೀಳಿಸುವುದಿಲ್ಲ" ಎಂದು ತಿಳಿಸಿದರು.
ಬಿಜೆಪಿಯ ಅಸಮಾಧಾನಿತ ಶಾಸಕ ಮುರುಗೇಶ್ ನಿರಾಣಿ ಅವರು ತಮ್ಮನ್ನು ಭೇಟಿಯಾದ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹೆಚ್ಡಿಕೆ ಅವರು, "ತಾನು ಆದಿಚುಂಚನಗಿರಿಗೆ ಹೋಗಿದ್ದು ಪೂಜ್ಯರ ಆಶೀರ್ವಾದಕ್ಕಾಗಿ ಮಾತ್ರ. ಶಾಸಕ ಮುರುಗೇಶ್ ನಿರಾಣಿ ಅವರೊಂದಿಗೆ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ಯಡಿಯೂರಪ್ಪ ಅವರು ಬಹಳ ಶ್ರಮಪಟ್ಟು ಮುಖ್ಯಮಂತ್ರಿಯಾಗಿದ್ದಾರೆ. ಯಾವುದೇ ಸರ್ಕಾರವನ್ನು ನಾನು ಅಸ್ಥಿರಗೊಳಿಸಲು ಹೋಗಲ್ಲ. ಅಸ್ಥಿರಗೊಳಿಸುವ ಯಾವ ಗುಂಪುಗಳೊಂದಿಗೂ ನಾನಿಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ" ಎಂದು ಹೇಳಿದರು.