ನವದೆಹಲಿ, ಮಾ.05 (DaijiworldNews/PY) : ಕೋವಿಡ್-19 ಕಾರಣದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಬ್ರಸೆಲ್ಸ್ ಭೇಟಿಯು ರದ್ದಾಗಿದ್ದು, ಮರು ನಿಗದಿಪಡಿಸಲಾಗುವುದು ಎಂದು ಗುರುವಾರ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಭಾರತ-ಯುರೋಪ್ ಒಕ್ಕೂಟ ಶೃಂಗಸಭೆ ವಿಚಾರವಾದ ಪ್ರಶ್ನೆಗಳಿಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು, ಕೋವಿಡ್ -19 ಕಾರಣದಿಂದಾಗಿ ಉಭಯ ದೇಶಗಳ ಪ್ರತಿನಿಧಿಗಳು ಪ್ರವಾಸ ಕೈಗೊಳ್ಳಬಾರದು ಎಂದು ತೀರ್ಮಾನಿಸಲಾಗಿದೆ ಎಂದರು.
ಮಾ.13ರಂದು ಬ್ರಸೆಲ್ಸ್ನಲ್ಲಿ ಭಾರತ-ಯುರೋಪ್ ಶೃಂಗಸಭೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಬುಧವಾರ, ಬ್ರಸೆಲ್ಸ್ನಿಂದ ಹತ್ತು ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಬೆಲ್ಜಿಯಂನಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 23ಕ್ಕೇರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಶೃಂಗಸಭೆಯ ಪರಸ್ಪರ ಅನುಕೂಲಕರ ದಿನಾಂಕವನ್ನು ಪುನಃ ನಿಗದಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಜಾಗತಿಕ ಆರೋಗ್ಯದ ಬಗ್ಗೆ ಕಾಳಜಿ ಹಾಗೂ ಬದ್ಧತೆ ತೋರುವ ಸಲುವಾಗಿ ಯುರೋಪ್ ಹಾಗೂ ಭಾರತದ ನಡುವಿನ ನಿಕಟ ಸಹಕಾರದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಹಾಗೂ ಏಕಾಏಕಿ ಕಾಣಿಸಿಕೊಂಡಿರುವ ಕೋವಿಡ್ -19 ಬಿಕ್ಕಟ್ಟು ಶೀಘ್ರದಲ್ಲೇ ಕಡಿಮೆಯಾಗಲಿದೆ ಎಂದು ಭಾವಿಸುತ್ತೇವೆ ಎಂದು ರವೀಶ್ ಕುಮಾರ್ ತಿಳಿಸಿದ್ದಾರೆ.
ಪ್ರಧಾನಿ ಮೋದಿಯವರ ಬಾಂಗ್ಲಾದೇಶ ಭೇಟಿ ನಿಗದಿಯಂತೆ ನಡೆಯಲಿದೆ ಹಾಗೂ ಅದರ ವಿವರಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳಲಾಗುವುದು ಎಂದು ತಿಳಿಸಿದ್ಧಾರೆ.