ನವದೆಹಲಿ, ಮಾ. 06 (Daijiworld News/MB) : ಖಾಸಗಿ ರಂಗದ ಪ್ರಮುಖ ಬ್ಯಾಂಕ್ ಯೆಸ್ ಬ್ಯಾಂಕ್ನ ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಹಣ ವಿತ್ ಡ್ರಾ ಮಾಡಲು ಮಿತಿ ಹೇರಿ ಗ್ರಾಹಕರಿಗೆ ಶಾಕ್ ನೀಡಿದೆ.
ಹಣಕಾಸು ಇಲಾಖೆ ಗುರುವಾರ ಸಂಜೆ ಈ ಆದೇಶ ಹೊರಡಿಸಿದ್ದು ಬ್ಯಾಂಕ್ನಲ್ಲಿ ಇಟ್ಟಿರುವ ಠೇವಣಿಗಳ ಮೇಲೆ ಹಣ ವಿತ್ ಡ್ರಾ ಮಾಡಲು 50,000 ರೂಪಾಯಿಗಳ ಮಿತಿ ಹೇರಿದೆ. 2020ರ ಏಪ್ರಿಲ್ 3ರವರೆಗೆ ಈ ನಿರ್ಬಂಧ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬ್ಯಾಂಕಿನ ಆರ್ಥಿಕ ಸ್ಥಿತಿ ಗಂಭೀರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯನ್ನು ವಜಾಗೊಳಿಸಲಾಗಿದೆ ಎಂದು ಆರ್ಬಿಐ ಸ್ಪಷ್ಟಪಡಿಸಿದೆ.
ಈ ಬೆಳವಣೆಗೆ ಬೆನ್ನಲ್ಲೇ ಯೆಸ್ ಬ್ಯಾಂಕ್ನ ಆನ್ಲೈನ್ ಬ್ಯಾಂಕಿಂಗ್ ಸೇವೆ ಜಾಮ್ ಆಗಿದ್ದು ಹೆಚ್ಚಿನ ಜನ ಹಣ ಹಿಂಪಡೆಯಲು ಮುಂದಾಗಿರುವುದು ಇದಕ್ಕೆ ಕಾರಣವಾಗಿರುವ ಸಾಧ್ಯತೆವಿದೆ. "ನಮ್ಮ ನೆಟ್ ಬ್ಯಾಂಕಿಂಗ್ನಲ್ಲಿ ಹೆಚ್ಚಿನ ಟ್ರಾಫಿಕ್ನಿಂದಾಗಿ ನಿಮ್ಮ ಬೇಡಿಕೆಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಸ್ವಲ್ಪ ಸಮಯದ ಬಳಿಕ ಪ್ರಯತ್ನಿಸಿ ಅಥವಾ ನಿಮ್ಮ ವರ್ಗಾವಣೆಗಳಿಗೆ 'ಯೆಸ್ ಮೊಬೈಲ್' ಆಪ್ ಬಳಸಿ," ಎಂಬ ಸಂದೇಶವನ್ನು ಬ್ಯಾಂಕ್ ಗ್ರಾಹಕರಿಗೆ ನೀಡುತ್ತಿದೆ.