ಮುಂಬೈ, ಮಾ. 06 (Daijiworld News/MB) : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ ಮೇಲೆ ವಂಚನೆ ಆರೋಪ ದೂರು ದಾಖಲು ಮಾಡಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ನೇತೃತ್ವದ ಚಿನ್ನದ ವ್ಯಾಪಾರ ಕಂಪನಿ ಸತ್ಯುಗ್ ಗೋಲ್ಡ್ ಪ್ರೈವೇಟ್ ಲಿಮಿಟೆಡ್ನಿಂದ ತನಗೆ ವಂಚನೆ ಆಗಿದೆ ಎಂದು ಸಚಿನ್ ಜೋಶಿ ಎಂಬ ಅನಿವಾಸಿ ಭಾರತೀಯರೊಬ್ಬರು ಪೊಲೀಸರನ್ನು ಸಂಪರ್ಕಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಸಚಿನ್ ಜೋಶಿ ಅವರು ಮಾರ್ಚ್ 2014ರಲ್ಲಿ ಗೋಲ್ಡ್ ಸ್ಕೀಮ್ನಲ್ಲಿ ಕಂಪನಿಯಿಂದ ₹18.58 ಲಕ್ಷಕ್ಕೆ ಸುಮಾರು ಒಂದು ಕೆಜಿ ಚಿನ್ನವನ್ನು ಖರೀದಿಸಿದ್ದು ಪಂಚವಾರ್ಷಿಕ ಯೋಜನೆಯಡಿ, ಖರೀದಿದಾರರಿಗೆ ರಿಯಾಯಿತಿ ದರದಲ್ಲಿ ಚಿನ್ನದ ಕಾರ್ಡ್ ನೀಡಲಾಗುತ್ತಿತ್ತು. ಅವಧಿ ಕೊನೆಯಲ್ಲಿ ನಿರ್ದಿಷ್ಟ ಪ್ರಮಾಣದ ಚಿನ್ನ ಪಡೆದುಕೊಳ್ಳಬಹುದೆಂಬ ಭರವಸೆ ನೀಡಲಾಗಿತ್ತು. ಯೋಜನೆ ಮಾರ್ಚ್ 25, 2019 ರಂದು ಕೊನೆಗೊಂಡಿದ್ದು ಸ್ಕೀಮ್ ಪ್ರಕಾರ, ಅವರು ನಿರ್ದಿಷ್ಟ ಪ್ರಮಾಣದ ಚಿನ್ನವನ್ನು ಪಡೆದುಕೊಳ್ಳಲು ಪ್ರಯತ್ನಿಸಿದಾಗ, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿದ್ದ ಕಂಪನಿಯ ಕಚೇರಿ ಸ್ಥಗಿತವಾಗಿದೆ ಎಂದು ದೂರಿದ್ದಾರೆ.
ಈ ಬಗ್ಗೆ ವಿಚಾರಿಸಿದಾಗ ಕಂಪನಿಯ ನಿರ್ದೇಶಕರಾಗಿದ್ದ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾಗಿ ದೂರುದಾರರಿಗೆ ತಿಳಿದಿದ್ದು ಈ ಬಗ್ಗೆ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಅವರ ಮೇಲೆ ವಂಚನೆ ಆರೋಪದಡಿ ದೂರು ನೀಡಿದ್ದಾರೆ.
ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.