ಮೈಸೂರು, ಮಾ. 06 (Daijiworld News/MB): ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಮುಖಂಡನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮೈಸೂರಿನ ಕುವೆಂಪುನಗರದ ಅಪಾರ್ಟ್ಮೆಂಟ್ವೊಂದರಲ್ಲಿ ತಡರಾತ್ರಿ ನಡೆದಿದೆ.
ಎಸ್. ಆನಂದ್ ಅಲಿಯಾಸ್ ವಡ್ಡ ಹತ್ಯೆಯಾದ ಬಿಜೆಪಿ ಮುಖಂಡ. ಹತ್ಯೆಯಾಗಿರುವ ಆನಂದ್ ಸರಸ್ವತಿ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ಎಂದು ತಿಳಿದು ಬಂದಿದೆ.
ಆನಂದ್ ಕಳೆದ 13 ವರ್ಷಗಳ ಹಿಂದೆ ಜನತಾ ನಗರದ ಸ್ಮಶಾನ ರಸ್ತೆಯಲ್ಲಿ ಕುಮಾರಸ್ವಾಮಿ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ. ಹಾಗಾಗಿ ಹಳೇ ವೈಷಮ್ಯದಿಂದಲ್ಲೇ ಹತ್ಯೆ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.
ಹತ್ಯೆಯಾದ ಆನಂದ್ ರಿಯಲ್ ಎಸ್ಟೇಟ್ ಹಾಗೂ ಫೈನಾನ್ಸ್ ನಡೆಸುತ್ತಿದ್ದು ಗುರುವಾರ ತನ್ನ ಹುಟ್ಟು ಹಬ್ಬವನ್ನು ಸ್ನೇಹಿತರೊಂದಿಗೆ ಸಂಭ್ರಮದಿಂದ ಆಚರಣೆ ಮಾಡಿದ್ದ ಎಂದು ಹೇಳಲಾಗಿದೆ. ಹುಟ್ಟು ಹಬ್ಬದ ದಿನವೇ ಕುವೆಂಪುನಗರದ ಚಂದನ ಮ್ಯಾನ್ಷನ್ನ ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಈ ಕುರಿತಾಗಿ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನಂದ್ ಕಳೆದ ಸಾಲಿನಲ್ಲಿ ಮೈಸೂರು ನಗರ ಬಿಜೆಪಿ ಸ್ಲಂ ಮೋರ್ಚಾದ ಉಪಾಧ್ಯಕ್ಷ ಆಗಿದ್ದ.