ನವದೆಹಲಿ, ಮಾ. 06 (Daijiworld News/MB) : ಆರ್ಥಿಕ ಬಿಕ್ಕಟ್ಟಿನಲ್ಲಿರುವ ಯೆಸ್ ಬ್ಯಾಂಕ್ ಮೇಲೆ ರಿಸರ್ವ್ ಬ್ಯಾಂಕ್ ನಿಷೇಧ ಹೇರಿದ್ದು, ಇದರ ಪರಿಣಾಮ ಫೋನ್ ಪೇ ಮೇಲಾಗಿದೆ.
ಯೆಸ್ ಬ್ಯಾಂಕ್ ಹಣ ವರ್ಗಾವಣಾ ಮೊಬೈಲ್ ಆಪ್ ಫೋನ್ ಪೇಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಆದರೆ ಈಗ ಯೆಸ್ ಬ್ಯಾಂಕ್ ಮೇಲೆ ಆರ್ಬಿಐ ದಿಢೀರ್ ನಿಷೇಧ ಹೇರಿದ ಪರಿಣಾಮ ಫೋನ್ ಪೇ ಸೇವೆಗಳು ದೊರಕುತ್ತಿಲ್ಲ.
ನಾವು ತಾತ್ಕಾಲಿಕವಾಗಿ ಲಭ್ಯವಿಲ್ಲ. ಅನಿಗದಿತ ನಿರ್ವಹಣೆಯಲ್ಲಿದ್ದೇವೆ. ನಮ್ಮ ಅಲಭ್ಯತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಫೋನ್ ಪೇ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿದೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಫೋನ್ ಪೇ ಸಿಇಓ ಸಮೀರ್ ನಿಗಮ್, "ಪ್ರಿಯ ಗ್ರಾಹಕರೇ, ದೀರ್ಘಕಾಲದ ಅಡಚಣೆಗಾಗಿ ನಾವು ವಿಷಾದಿಸುತ್ತೇವೆ. ನಮ್ಮ ಪಾಲುದಾರ ಯೆಸ್ ಬ್ಯಾಂಕ್ ಮೇಲೆ ಆರ್ಬಿಐ ನಿಷೇಧ ಹೇರಿದೆ. ಈಗ ಸೇವೆಗೆ ಮರಳಲು ನಮ್ಮ ತಂಡ ಶ್ರಮಿಸುತ್ತಿದೆ. ಕೆಲವೇ ಗಂಟೆಗಳಲ್ಲಿ ಮತ್ತೆ ಮರಳಿ ಬರುತ್ತೇವೆ ಎಂದು ನಂಬಿದ್ದೇವೆ. ನಿಮ್ಮ ತಾಳ್ಮೆಗೆ ಧನ್ಯವಾದಗಳು" ಎಂದು ತಿಳಿಸಿದ್ದಾರೆ.
ತೀವ್ರ ಹಣಕಾಸು ಬಿಕ್ಕಟ್ಟಿಗೆ ಸಿಲುಕಿರುವ ಖಾಸಗಿ ಸ್ವಾಮ್ಯದ ಯೆಸ್ ಬ್ಯಾಂಕ್ನ ನಿರ್ದೇಶಕ ಮಂಡಳಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆರ್ಬಿಐ ಗುರುವಾರ ರದ್ದು ಪಡಿಸಿತ್ತು. ಗ್ರಾಹಕರು ಪ್ರತಿ ಖಾತೆಯಿಂದ 50 ಸಾವಿರ ರೂಪಾಯಿವರೆಗೆ ಮಾತ್ರ ಹಿಂದಕ್ಕೆ ಪಡೆಯಲು ನಿರ್ಬಂಧ ಹೇರಿದೆ.