ಕೋಲಾರ, ಮಾ 6 (Daijiworld News/MSP): 19 ವರ್ಷದ ಯುವತಿ ಜೊತೆ ಪರಾರಿಯಾಗಿ ಆ ಬಳಿಕ ತಿರುಪತಿಯಲ್ಲಿ ಮದುವೆಯಾಗಿರುವುದಾಗಿ ಹೇಳಿಕೊಂಡು ಪೊಲೀಸರ ಅತಿಥಿಯಾಗಿದ್ದ ಕೋಲಾರದ ಸ್ವಾಮೀಜಿ ಪ್ರಕರಣ ಹೊಸ ತಿರುವು ಪಡೆದಿದೆ.
ದತ್ತಾತ್ರೇಯ ಅವಧೂತ ಸ್ವಾಮೀಜಿ ಅಲಿಯಾಸ್ ರಾಘವೇಂದ್ರ ಜೊತೆ ಮನೆ ತೊರೆದು ಹೋಗಿದ್ದ ಹೊಳಲಿ ಗ್ರಾಮದ ಯುವತಿ ಪೋಷಕರ ಮತ್ತು ಗ್ರಾಮದ ಮುಖಂಡರ ಬುದ್ದಿ ಮಾತಿಗೆ ಮಣಿದು ತವರು ಮನೆ ಸೇರಿದ್ದಾಳೆ. ಆತ್ತ ಆರೋಪಿ ದತ್ತಾತ್ರೇಯ ಜೈಲು ಪಾಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಗ್ರಾಮದ ಮುಖಂಡರೋರ್ವರು, ಯುವತಿಗೆ " ನಿನ್ನನ್ನು ಮದುವೆಯಾದ ವ್ಯಕ್ತಿ ಮೇಲೆ ಈಗಾಗಲೇ ಹತ್ತಾರು ದೂರುಗಳಿವೆ. ನಿನ್ನ ಮನಸ್ಸು ಕೆಡಿಸಿ ಮದುವೆಯಾಗಿರುವವರೊಂದಿಗೆ ಬಾಳುವುದು ಕಷ್ಟ, ಈಗಾಗಲೇ ಮೂವರು ಮಹಿಳೆಯರಿಗೆ ಮೋಸ ಮಾಡಿರುವ ಇವನೊಂದಿಗೆ ಬಾಳುವುದಕ್ಕಿಂದ ತವರು ಮನೆ ಸೇರುವುದೇ ವಾಸಿ ಎಂದು ಬುದ್ದಿವಾದ ಹೇಳಿದ್ದರು.
ಇದೀಗ ಮನೆಗೆ ವಾಪಸ್ ಆಗಿರುವ ಯುವತಿ ಸ್ವಾಮೀಜಿ ಜೊತೆ ಇರಲು ಇಷ್ಟವಿರಲಿಲ್ಲ ಎಂದು ಪೊಲೀಸರ ಬಳಿ ಹೇಳಿದ್ದಾಳೆ. ಯುವತಿ ಮೊನ್ನೆ ಫೋನಿನಲ್ಲಿ ಮಾತನಾಡುವಾಗ ಕೂಡ ಸ್ವಾಮೀಜಿಯನ್ನು ಬಿಡಲ್ಲಎಂದಿದ್ದಳು. ಆದರೆ ಬಂಧಿತ ಆರೋಪಿ ಮಾತ್ರ ಇದಕ್ಕೆ ತದ್ವಿರುದ್ಧವಾಗಿದ್ದು, ನಾನೇನು ಮೋಸ ಮಾಡಿ ತಾಳಿ ಕಟ್ಟಿಲ್ಲ, ನನ್ನ ಬಳಿ ಸಾಕ್ಷಿ ಇದೆ ಕಾನೂನು ಹೋರಾಟ ಮಾಡುವುದಾಗಿ ಸವಾಲು ಹಾಕಿದ್ದಾರೆ. "ಸನ್ಯಾಸತ್ವ ಬಿಟ್ಟು ಮದುವೆಯಾಗಿದ್ದೇನೆ. ಸಾಕ್ಷಿ ಸಮೇತ ಕಾನೂನು ಹೋರಾಟ ಮಾಡುತ್ತೇನೆ" ಎಂದು ಪೊಲೀಸ್ ಠಾಣೆಯಲ್ಲೇ ಶಪಥ ಮಾಡಿದ್ದಾರೆ.