ನವದೆಹಲಿ, ಮಾ.06 (DaijiworldNews/PY) : ಕೆಲ ವಿವಾದಾತ್ಮಕ ಪ್ರಶ್ನೆಗಳನ್ನು ಎನ್ಪಿಆರ್ ಫಾರ್ಮ್ನಿಂದ ತೆಗೆದುಹಾಕಲು ಸರಕಾರ ಮನಸ್ಸು ಮಾಡುತ್ತಿಲ್ಲ ಎಂಬುವುದಕ್ಕೆ ಸಾಕ್ಷ್ಯ ದೊರೆತಿದೆ. ಈ ಹಿಂದೆಯು ಕೂಡಾ ತಂದೆ-ತಾಯಿಯ ಜನನ ಸ್ಥಳ ಹಾಗೂ ದಿನಾಂಕದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದ್ದು, ಹಾಗೂ ಬ್ಯಾಕ್-ಎಂಡ್ ಡಾಟಾ ಪ್ರೊಸೆಸಿಂಗ್ಗೆ ಅಗತ್ಯವಾಗಿದೆ ಎಂದು ಸಂಸದೀಯ ಸ್ಥಾಯಿ ಸಮಿತಿಗೆ ಗೃಹ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.
ಗುರುವಾರ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದ ಆನಂದ್ ಶರ್ಮ ನೇತೃತ್ವದ ಗೃಹ ವ್ಯವಹಾರಗಳ ಸ್ಥಾಯಿ ಸಮಿತಿಯು, ತನ್ನ ಅನುದಾನ ಬೇಡಿಕೆಗಳ ವರದಿಯನ್ನು ಮಂಡಿಸಿದೆ. 2020-21ನೇ ಸಾಲಿನ ಎನ್ಪಿಆರ್ ಫಾರ್ಮ್ನಲ್ಲಿ ಹೆತ್ತವರ ಜನನ ಸ್ಥಳ ಹಾಗೂ ದಿನಾಂಕದ ಕುರಿತಾದ ಪ್ರಶ್ನೆಯ ಬಗ್ಗೆ ಸಚಿವಾಲಯವನ್ನು ಕೇಳಿದ್ದು, 2010ರಲ್ಲಿ ನಡೆಸಲಾದ ಎನ್ಪಿಆರ್ನಲ್ಲಿ ಕೂಡಾ ಒಂದು ಕುಟುಂಬದಲ್ಲಿದ್ದ ಎಲ್ಲಾ ಹೆತ್ತವರ ಕುರಿತಂತೆ ಈ ಮಾಹಿತಿ ಪಡೆಯಲಾಗಿತ್ತು ಎಂದು ಸಚಿವಾಲಯ ತಿಳಿಸಿದೆ ಎಂದು ವರದಿ ಹೇಳಿದೆ.
ಎನ್ಪಿಆರ್ ಪ್ರಕ್ರಿಯೆ ವೇಳೆ, ಹೆತ್ತವರು ಬೇರೆಡೆ ವಾಸಿಸುತ್ತಿದ್ದರೆ ಅಥವಾ ಅದಾಗಲೇ ಮೃತಪಟ್ಟಿದ್ದರೆ ಅಂಥವರ ಹೆಸರನ್ನು ಮಾತ್ರ ಪಡೆಯಲಾಗಿತ್ತು. ಬ್ಯಾಕ್ ಎಂಡ್ ಡಾಟಾ ಪ್ರೊಸೆಸಿಂಗ್ಗೆ ಅನುವಾಗಲು ಎನ್ಪಿಆರ್ 2020ರಲ್ಲಿ ಎಲ್ಲಾ ಮಾಹಿತಿಗಳನ್ನು ಪಡೆಯಲಾಗುವುದು ಎಂದು ಸಚಿವಾಲಯದ ಉತ್ತರದಲ್ಲಿ ತಿಳಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.