ರಾಮನಗರ, ಮಾ. 06 (Daijiworld News/MB) : ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ ಬಿಜೆಪಿ ಸರ್ಕಾರ ಕೆಡವಲು ಪ್ಲ್ಯಾನ್ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಆರೋಪ ಮಾಡಿದ್ದಾರೆ.
ಈ ಬಗ್ಗೆ ಚನ್ನಪಟ್ಟಣದ ದೊಡ್ಡಮಳೂರಿನ ಬಮೂಲ್ ಉತ್ಸವದಲ್ಲಿ ಭಾಗವಹಿಸಿ ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಕೆಡವಲು ಸಿ.ಪಿ. ಯೋಗೇಶ್ವರ್ ಪ್ಲ್ಯಾನ್ ಮಾಡುತ್ತಿದ್ದಾರೆ. ಇದರ ಜೊತೆ ಉದ್ಯಮಿ ಉದಯ್ ಗೌಡನನ್ನು ಸೇರಿಸಿಕೊಂಡಿದ್ದಾರೆ. ಉದಯ್ಗೌಡ ಬೆಂಗಳೂರಿನಲ್ಲಿ ಇಸ್ಪೀಟ್ ದಂಧೆ ನಡೆಸುತ್ತಿದ್ದಾನೆ. ನಾನು ನನ್ನ ಸರ್ಕಾರ ಇರುವಾಗ ಅದಕ್ಕೆಲ್ಲಾ ಕಡಿವಾಣ ಹಾಕಿದ್ದೆ. ಹಾಗಾಗಿ ಇವರೆಲ್ಲಾ ಸೇರಿ ಹಣ ಹಾಕಿ ನನ್ನ ಸರ್ಕಾರವನ್ನು ಕೆಡವಿದರು. ಈಗ ಈ ಕ್ಷೇತ್ರದ ಮಾಜಿ ಶಾಸಕ(ಸಿ.ಪಿ.ಯೋಗೇಶ್ವರ್)ನ ಜೊತೆ ಸೇರಿ ಬಿಜೆಪಿ ಸರ್ಕಾರ ಬೀಳಿಸಲು ಮುಂದಾಗಿದ್ದಾರೆ ಎಂದು ಕುಮಾರಸ್ವಾಮಿ ದೂರಿದ್ದಾರೆ.
ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವೆ ಆಗಾಗ ರಾಜಕೀಯ ವಾಗ್ದಾಳಿಗಳು ನಡೆಯುತ್ತಿದ್ದು ಈಗ ಕುಮಾರ ಸ್ವಾಮಿ ಈ ಆರೋಪ ಮಾಡಿದ್ದಾರೆ.
ಸಿ.ಪಿ. ಯೋಗೇಶ್ವರ್ ವಿರುದ್ಧ ತನ್ನ ವಾಗ್ಧಾಳಿ ಮುಂದುವರೆಸಿದ ಕುಮಾರಸ್ವಾಮಿ, "ಈ ಕ್ಷೇತ್ರದ ಮಾಜಿ ಶಾಸಕರು ಮಂತ್ರಿಯಾಗುತ್ತೇನೆ ಎಂದು ಮಂಡ್ಯದವರೆಗೆ ಬ್ಯಾನರ್ಗಳನ್ನು ಹಾಕಿಸಿಕೊಂಡಿದ್ದರು. ಆದರೆ ಯಡಿಯೂರಪ್ಪನವರು ಈಗ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಹಾಗಾಗಿ ಬಿಜೆಪಿ ಸರ್ಕಾರ ಕೆಡವಲು ಪ್ಲ್ಯಾನ್ ಮಾಡಿದ್ದಾರೆ. ಅದಕ್ಕೆಲ್ಲಾ ಮೂಲ ಪುರುಷ ಇವರೇ ಎಂದಿದ್ದಾರೆ.
ಬಿಜೆಪಿ ಸರ್ಕಾರ ಉರುಳಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಈ ಹಿಂದೆ ನನ್ನ ಸರ್ಕಾರ ಉರುಳಿಸಲು ಉದಯ್ಗೌಡ ಹಾಗೂ ಇತರರು ಯಡಿಯೂರಪ್ಪನವರಿಗೆ ಹಣ ನೀಡಿದ್ದರು. ಆದರೆ ಈಗ ಅವರೇ ಯಡಿಯೂರಪ್ಪನವರ ಸರ್ಕಾರ ಉರುಳಿಸಲು ಮುಂದಾಗಿದ್ದಾರೆ. ಹೀಗಾಗಿ ಅವರು ನಡೆಸುತ್ತಿರುವ ದಂಧೆಗಳ ಮೇಲೆ ದಾಳಿಯಾಗುತ್ತಿದೆ ಎಂದು ಹೇಳಿದ್ದಾರೆ.